ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹೊನ್ನಾಪುರ ಗ್ರಾಮದ ಬಳಿ ಟ್ರ್ಯಾಕ್ಟರ್‌ಗೆ ಕಾರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರನ್ನು ಸೆರೆವಾಡ ಗ್ರಾಮದ ಹನುಮಂತಪ್ಪ ಮುಲಗಿ (55) ಮತ್ತು ಚಂದ್ರು ಸಿರಕೋಳ (40) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ನೂಲ್ವಿ ಗ್ರಾಮದಿಂದ ಟ್ರ್ಯಾಕ್ಟರ್ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಜಾತ್ರೆಗೆ ತೆರಳುತಿತ್ತು ಎನ್ನಲಾಗಿದೆ. ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರ್ ಹಿಂದಿನಿಂದ ಡಿಕ್ಕಿಯಾಗಿದೆ. ಅಪಘಾತ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ತಡಸ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರಿನಲ್ಲಿ ಭೀಕರ ಘಟನೆ: ಧೂಳು ಬರುವ ಹಾಗೆ ವಾಹನ ಚಲಾಯಿಸಬೇಡ, ನಿಧಾನವಾಗಿ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿಯ ಮೇಲೆ ಟಿಪ್ಪರ್ ಚಲಾಯಿಸಿ ಕೊಲೆ ಮಾಡಿದ ಘಟನೆ ಮೂಡುಬಿದಿರೆಯ ಕೋಟೆಬಾಗಿಲಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಕೋಟೆಬಾಗಿಲಿನ ನಿವಾಸಿ ಫಯಾಝ್ (61) ಕೊಲೆಗೀಡಾದ್ದಾರೆ. ಫಯಾಝ್‌ಗೆ ರಾಡ್ನಿಂದ ಹೊಡೆದು, ಟಿಪ್ಪರ್ ಚಲಾಯಿಸಿ ಹತ್ಯೆ ಮಾಡಲಾಗಿದೆ.
ಫಯಾಝ್ ಕೋಟೆಬಾಗಿಲು ಮಸೀದಿಗೆ ನಮಾಜ್ಗೆಂದು ಮಧ್ಯಾಹ್ನ ತೆರಳುವ ಸಂದರ್ಭ ಕೋಟೆಬಾಗಿಲು ನಿವಾಸಿ, ಟಿಪ್ಪರ್ ಚಾಲಕ ಆರೀಸ್ ಎಂಬಾತ ಅತೀ ವೇಗದಿಂದ ಟಿಪ್ಪರ್ ಚಲಾಯಿಸಿಕೊಂಡು ಬಂದಿದ್ದಾನೆ. ಇದರಿಂದಾಗಿ ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ಫಯಾಝ್ ಮೇಲೆ ಧೂಳು ಹಾರಿದೆ. ಆಗ ಕೋಪಗೊಂಡ ಫಯಾಝ್ ನಿಧಾನ ಹೋಗುವಂತೆ ಆರೀಸ್ಗೆ ಹೇಳಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ನಮಾಜ್ ಮುಗಿಸಿಕೊಂಡು ಹಿಂತಿರುಗುವ ಸಂದರ್ಭದಲ್ಲಿಯೂ ಮತ್ತೆ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಫಯಾಝ್ ಟಿಪ್ಪರ್ನ ಮೇಲೆ ಹೋಗಿ ಮಾತನಾಡಿದ್ದಾನೆ. ಆಗ ಆರೀಸ್ ಮಾರಕಾಸ್ತ್ರದಿಂದ ತಲೆಗೆ ಹೊಡೆದು ಟಿಪ್ಪರ್ ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಾಯಿಸಿದ್ದಾನೆ. ಆಯತಪ್ಪಿ ಫಯಾಝ್ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ಅವರ ಮೇಲೆಯೇ ಟಿಪ್ಪರ್ ಹಾಯಿಸಿದ್ದಾನೆ.
ರಾಡ್ ಏಟು ಮತ್ತು ಟಿಪ್ಪರ್ನ ಅಡಿಗೆ ಬಿದ್ದ ಫಯಾಝ್ ಗಂಭೀರ ಗಾಯಗೊಂಡಿದ್ದನು. ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಆರೋಪಿ ಆರೀಸ್ ಟಿಪ್ಪರನ್ನು ಅರ್ಧ ದಾರಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಧೂಳು ಬರುವ ಹಾಗೆ ವಾಹನ ಚಲಾಯಿಸ್ಬೇಡ ಎಂದಿದ್ದಕ್ಕೆ ಮೈಮೇಲೆ ಟಿಪ್ಪರ್ ಚಲಾಯಿಸಿ ಕೊಲೆ!
ಚಿನ್ನ, ಇ-ಸಿಗರೇಟ್ ವಶ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಚಿನ್ನ ಮತ್ತು ಇ ಸಿಗರೇಟನ್ನು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ದುಬೈನಿಂದ ಆಗಮಿಸಿದ ಐವರು ಪುರುಷ ಪ್ರಯಾಣಿಕರಿಂದ ರೂ.90,34,970/- ಮೌಲ್ಯದ 1617 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ : ಮಂಗಳೂರು: ಚಿನ್ನಾಭರಣ ಅಂಗಡಿಗೆ ನುಗ್ಗಿ ಚಾಕುವಿನಿಂದ ಇರಿದು ಸಿಬ್ಬಂದಿ ಹತ್ಯೆ