ಹಾವೇರಿ : ಪಂಚಮಸಾಲಿ ಮೀಸಲಾತಿ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟ ಮಾತು ತಪ್ಪಿದ್ದಾರೆ. ಮೀಸಲಾತಿ ಘೋಷಣೆಯ ವಿಳಂಬ ನೀತಿ ಖಂಡಿಸಿ ಸೆಪ್ಟೆಂಬರ್ 20ರಂದು ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿರುವ ಸಿಎಂ ಬೊಮ್ಮಾಯಿಯವರ ನಿವಾಸದ ಎದುರು ಒಂದು ದಿನದ ಸತ್ಯಾಗ್ರಹ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿಗಳು ಆಗಸ್ಟ್ 22ರ ಒಳಗೆ ಸಿಹಿ ಸುದ್ದಿ ಕೊಡುವುದಾಗಿ ಹೇಳಿದ್ದರು. ಆದರೆ ಮುಖ್ಯಮಂತ್ರಿಗಳು ನಮ್ಮ ಸಮಾಜದ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಅನಿಸುತ್ತದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ ಮಾತು ತಪ್ಪಿದ್ದರು. ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಕೂಡ ನಾಲ್ಕು ಬಾರಿ ಕೊಟ್ಟ ಮಾತು ತಪ್ಪಿದ್ದಾರೆ. ವಿಶ್ವಾಸಕ್ಕೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಸಮಾಜದ ನಿರ್ಣಯದಂತೆ ಒಂದು ದಿನದ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಶ್ರೀಗಳು ಹೇಳಿದರು.
ಈ ಸತ್ಯಾಗ್ರಹಕ್ಕೆ ರಾಜ್ಯದ ಎಲ್ಲಾ ಕಡೆಗಳಿಂದಲೂ ಈಗಾಗಲೇ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ. ಸೆಪ್ಟೆಂಬರ್ 20ರಂದು ಬೆಳಗ್ಗೆ 9ಗಂಟೆಗೆ ಶಿಗ್ಗಾಂವಿಯ ಚೆನ್ನಮ್ಮನ ಮೂರ್ತಿಗೆ ಪೂಜೆ ಸಲ್ಲಿಸಿ ಸಿಎಂ ನಿವಾಸದೆದುರು ಸತ್ಯಾಗ್ರಹ ಆರಂಭಿಸಲಾಗುವುದು ಎಂದರು.
ಸಿಎಂ ನಿವಾಸದ ಮುಂದೆ ಧರಣಿ ಸತ್ಯಾಗ್ರಹ : ಇನ್ನು, ಸತ್ಯಾಗ್ರಹಕ್ಕೂ ಮಣಿಯದಿದ್ದರೆ ಅಕ್ಟೋಬರ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಮಾಡುತ್ತೇವೆ. ಅಂತಿಮವಾಗಿ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿ ಕೆಲವು ನಿರ್ಣಯಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇನ್ನು ಈ ಬಗ್ಗೆ ಸೋಮವಾರ ನಮ್ಮ ಸಮಾಜದ ಎಲ್ಲ ಶಾಸಕರು ಅಧಿವೇಶನದಲ್ಲಿ ಧ್ವನಿ ಎತ್ತುತ್ತಾರೆ. ಬೊಮ್ಮಾಯಿಯವರಿಗೆ ಅಧಿಕಾರ ಕೊಟ್ಟ ಸಮುದಾಯಗಳಲ್ಲಿ ನಮ್ಮ ಸಮುದಾಯದ ಪಾತ್ರವೂ ಇದೆ. ಅವರು ಸಿಎಂ ಆಗಿದ್ದರಿಂದ ಅವರ ಮೇಲೆ ಒತ್ತಡ ಹಾಕುತ್ತಿದ್ದೇವೆ. ಹಿಂದೆ ಮೀಸಲಾತಿ ವಿಚಾರದ ಹೋರಾಟದಲ್ಲಿ ಭಾಗವಹಿಸಿ ಭರವಸೆ ಕೊಟ್ಟಿದ್ದರು.
ಮೀಸಲಾತಿ ತಡೆಯುತ್ತಿರುವ ವ್ಯಕ್ತಿಯ ಹೆಸರು ಶೀಘ್ರ ಬಹಿರಂಗ : ಸಿಎಂ ಬೊಮ್ಮಾಯಿಯವರ ಮಾತಿಗೆ ಬೆಲೆ ಕೊಟ್ಟು ಈವರೆಗಿನ ಹೋರಾಟವನ್ನು ಹಿಂಪಡೆಯುತ್ತಾ ಬಂದಿದ್ದೇವೆ. ಯಾರೋ ಒಬ್ಬ ವ್ಯಕ್ತಿಯ ಒತ್ತಡಕ್ಕೆ ಮಣಿದು ಮೀಸಲಾತಿ ವಿಳಂಬ ಮಾಡುತ್ತಿದ್ದಾರೆ. ಮೀಸಲಾತಿ ವಿಳಂಬ ಮಾಡಿಸುತ್ತಿರುವ ವ್ಯಕ್ತಿಯ ಹೆಸರನ್ನು ಸತ್ಯಾಗ್ರಹದ ವೇಳೆ ಬಹಿರಂಗಪಡಿಸುವುದಾಗಿ ತಿಳಿಸಿದರು.
ಹಾಲುಮತ ಸಮಾಜಕ್ಕೆ ಮೀಸಲಾತಿ : ಮೀಸಲಾತಿ ಅವಶ್ಯವಿಲ್ಲ ಎಂಬ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿದ ಅವರು, ಈಶ್ವರಪ್ಪ ತಮಗೆ ಜನ್ಮಕೊಟ್ಟ ಹಾಲುಮತ ಸಮಾಜಕ್ಕೆ ಮೀಸಲಾತಿ ವಿರೋಧ ಮಾಡಿದ್ದು ಸರಿಯಲ್ಲ. ಅವರೇ ಮೀಸಲಾತಿ ಹೋರಾಟ ಮಾಡಿ, ಇಂದು ಅವರೇ ವಿರೋಧ ಮಾಡುತ್ತಿರುವುದು ಅವರ ಸಮಾಜಕ್ಕೆ ನೋವಾಗುತ್ತದೆ ಬಸವಜಯ ಮೃತ್ಯುಂಜಯಶ್ರೀಗಳು ತಿಳಿಸಿದರು.
ಇದನ್ನೂ ಓದಿ : ನಾವು ಮಾಡಿದ ಕಾರ್ಯಗಳಿಂದ ಬೇರೆಯವರು ಪ್ರಚಾರ ಪಡೆಯುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ