ಹಾನಗಲ್(ಹಾವೇರಿ): ರೈತರಿಗೆ ಸೂಕ್ತ ಸಮಯಕ್ಕೆ ಅಭಿಲಾಷ್ ಭತ್ತ ಸಿಗದೆ ಹೊಲಗಳೆಲ್ಲ ಖಾಲಿ ಖಾಲಿಯಾಗಿದ್ದು, ರೈತರಲ್ಲಿ ಆತಂಕ ಹೆಚ್ಚಿದೆ.
ಹಾನಗಲ್ ತಾಲೂಕಿನಲ್ಲಿ ಭತ್ತದ ಬೆಳೆಗಾರರು ಹೆಚ್ಚು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭತ್ತದ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಅಭಿಲಾಷ್ ಭತ್ತಕ್ಕೆ ಹೆಚ್ಚಿನ ಬೇಡಿಕೆ ಇದೆ. ಬಿತ್ತನೆ ಪ್ರಾರಂಭವಾಗಿ ತಿಂಗಳು ಕಳೆದರೂ ಇಲ್ಲಿಯವರೆಗೂ ಹಾನಗಲ್ ಕೃಷಿ ಇಲಾಖೆ ಅಭಿಲಾಷ್ ಭತ್ತವನ್ನು ಪೂರೈಸಲು ಮುಂದಾಗುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ತವರು ಜಿಲ್ಲೆಯಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡದೆ ಹೋದರೆ ಇಳುವರಿ ಬರುವುದಿಲ್ಲ. ಸರಕಾರ ಈ ಕೂಡಲೇ ಭತ್ತದ ಬೆಳೆಗಾರರ ಸಮಸ್ಯೆಯನ್ನ ಅರಿತು ರೈತರ ಸಹಾಯಕ್ಕೆ ಬರಬೇಕು ಎಂದು ತಾಲೂಕಿನ ರೈತರು ಆಗ್ರಹಿಸುತಿದ್ದಾರೆ.
ಈಗಾಗಲೇ ಸೋಯಾಬಿನ್ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಭತ್ತದ ಬೆಳೆಗಾರರು ಅಭಿಲಾಷ್ ಭತ್ತಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರಕಾರ ಎಚ್ಚೆತ್ತುಕೊಂಡು ಅಭಿಲಾಷ್ ಬೀಜವನ್ನ ಪೂರೈಕೆ ಮಾಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.