ಹಾವೇರಿ: ಜನವರಿ 8ರಂದು ಜಿಲ್ಲೆಯ ಹಾನಗಲ್ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ 8ನೇ ಆರೋಪಿಯನ್ನ ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಕ್ಕಿಆಲೂರು ಗ್ರಾಮದ 23 ವರ್ಷದ ಮಫೀದ್ ಓಣಿಕೇರಿ ಎಂದು ಗುರುತಿಸಲಾಗಿದೆ.
ಪ್ರಕರಣದಲ್ಲಿ ಇನ್ನೂ ಮೂರ್ನಾಲ್ಕು ಆರೋಪಿಗಳು ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ತನಿಖೆ ಮುಂದುವರೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಪಿಎಸ್ಐ-ಕಾನ್‌ಸ್ಟೆಬಲ್ ಅಮಾನತು: ಪ್ರಕರಣದಲ್ಲಿ ಕರ್ತವ್ಯಲೋಪ ಮತ್ತು ವಿಳಂಬ ಧೋರಣೆ ಅನುಸರಿಸಿದ ಆರೋಪದಡಿ ಹಾನಗಲ್ ಪೊಲೀಸ್ ಠಾಣೆ ಪಿಎಸ್ಐ ಶ್ರೀಧರ್ ಎಸ್.ಆರ್. ಮತ್ತು ಕಾನ್‌ಸ್ಟೆಬಲ್ ಇಲಿಯಾಜ್ ಶೇತಸನದಿ ಎಂಬವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಮಾಹಿತಿ ಸಂಗ್ರಹಿಸುವಲ್ಲಿ ವೈಫಲ್ಯ ಮತ್ತು ಎಫ್ಐಆರ್ ದಾಖಲಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ. ಅಲ್ಲದೆ, ಆರೋಪಿಗಳ ಬಂಧನದಲ್ಲಿ ವಿಳಂಬ ನೀತಿ ಅನುಸರಿಸಿದ್ದಾರೆ ಎಂದು ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್ ಸಸ್ಪೆಂಡ್ ಮಾಡಿರುವುದಾಗಿ ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ: ಎಸ್‌ಪಿ
ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಕಿಮ್ಸ್ಗೆ ಶಿಫ್ಟ್: ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದು, ಗಾಯಗೊಂಡು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮಹಮದ್ ಸೈಫ್ ಕಿಮ್ಸ್ಗೆ ಶಿಫ್ಟ್ ಆದ ಆರೋಪಿ. ಈ ಬಗ್ಗೆ ಹಾವೇರಿ ಜಿಲ್ಲಾಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಆರ್.ಹಾವನೂರು ಮಾಹಿತಿ ನೀಡಿದ್ದಾರೆ.
ಜನವರಿ 10ರಂದು ಅಪಘಾತದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದ ಆರೋಪಿ ಸೈಫ್ನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಜಿಲ್ಲಾಸ್ಪತ್ರೆಯ ಎಲುಬು ಕೀಲು ತಜ್ಞರು ಚಿಕಿತ್ಸೆ ನೀಡಿದ್ದರು. ಕಾಲಿಗೆ ಪ್ಯಾಕ್ಚರ್ ಆದ ಕಾರಣ ಕಾಲಿನಲ್ಲಿ ಬಾವು ಬಂದಿತ್ತು. ಬಾವು ಹೆಚ್ಚಾದ ಕಾರಣ, ಶಸ್ತ್ರಚಿಕಿತ್ಸೆ ಅಗತ್ಯತೆಯ ಹಿನ್ನೆಲೆಯಲ್ಲಿ ಆತನನ್ನು ಕಿಮ್ಸ್ಗೆ ಶಿಫ್ಟ್ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ