ಹಾವೇರಿ: ಜಿಲ್ಲೆಯಲ್ಲಿ ಕೇಂದ್ರದ ಮಹತ್ವಾಕಾಂಕ್ಷೆ ಯೋಜನೆ ನರೇಗಾದಿಂದ ಸಾವಿರಾರು ಜನರಿಗೆ ಉದ್ಯೋಗ ಲಭಿಸಿದೆ. ಕೆರೆ ಹೂಳೆತ್ತುವುದು, ಕಾಲುವೆ ಹೂಳು ತಗೆಯುವುದು ಮತ್ತು ಜಂಗಲ್ ಕಟಾವು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ನಿರುದ್ಯೋಗಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಲು ನರೇಗಾ ಸಹಕಾರಿಯಾಗಿದೆ.
ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಹಲವು ವಿಶೇಷ ವ್ಯಕ್ತಿಗಳು ನರೇಗಾ ಯೋಜನೆ ಅಡಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲೊಬ್ಬರಾದ ಶಿವಪ್ಪ ಅವರು ಒಬ್ಬನ ಮನೆಗೆ ಬೆಂಕಿ ಹಿಡಿದ ಸಂದರ್ಭದಲ್ಲಿ ಮನೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಹೋಗಿ ಮೈ ಕೈಗೆ ಪೂರ್ತಿ ಸುಟ್ಟಗಾಯಗಳಾಯಿತು. ಬಳಿಕ ಗ್ರಾಮದಲ್ಲಿ ಎಲ್ಲಿಯೂ ಕೆಲಸ ಸಿಗದೇ, ಜೊತೆಗೆ ತಮ್ಮ ಮುಕ್ಕಾಲು ಎಕರೆ ಜಮೀನಿನಲ್ಲಿ ದುಡಿಯಲು ಸಾಧ್ಯವಾಗದಿದ್ದಾಗ ನರೇಗಾ ಯೋಜನೆಯ ಕೆಲಸಕ್ಕೆ ಬಂದರು. ಸದ್ಯ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಅದೇ ರೀತಿ ಬೀರಪ್ಪ ತಮ್ಮನ್ನು ತಾವು ನರೇಗಾ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 55 ವರ್ಷದ ಬೀರಪ್ಪ ಅವರು ಹುಟ್ಟಿದಾಗಿನಿಂದಲೇ ವಿಕಲಚೇತನರಾಗಿದ್ದು,ಯಾವುದೇ ದೊಡ್ಡಮಟ್ಟದ ಕೆಲಸಗಳನ್ನು ಮಾಡಲಾಗುವುದಿಲ್ಲ. ಆದರೆ, ಸಣ್ಣಪುಟ್ಟ ಕೆಲಸಗಳನ್ನು ಬೀರಪ್ಪ ಅಚ್ಚುಕಟ್ಟಾಗಿ ಮಾಡುತ್ತಾರೆ. ಇವರನ್ನು ಕಂಡ ನರೇಗಾ ಅಧಿಕಾರಿಗಳು ಇವರಿಗೆ ಕೂಲಿ ಕೆಲಸ ಮಾಡುವ ಕೆಲಸಗಾರರಿಗೆ ನೀರು ಸೇರಿದಂತೆ ಇತರ ವಸ್ತುಗಳ ಪೂರೈಕೆಯ ಕೆಲಸ ನೀಡಿದ್ದಾರೆ. ನರೇಗಾ ಯೋಜನೆ ನಿಜಕ್ಕೂ ನನ್ನಂತಹ ಸಾಕಷ್ಟು ವಿಕಲಚೇತನರಿಗೆ ಸಾಕಷ್ಟು ಉಪಕಾರವಾಗಿದೆ ಎಂದು ಬೀರಪ್ಪ ಹೇಳುತ್ತಾರೆ.
ಇನ್ನು ನರೇಗಾದಲ್ಲಿ ಕೆಲಸ ಮಾಡುವ 50 ವರ್ಷದ ಬಸಪ್ಪನವರದು ಮತ್ತೊಂದು ಕಥೆ. ಬಸಪ್ಪ ಅವರು ಹರೆಯದಲ್ಲಿ ಮಂಗಳೂರಿಗೆ ದುಡಿಯಲು ಹೋಗಿದ್ದರು. ಅಲ್ಲಿ ನಡೆದ ಅಪಘಾತದಲ್ಲಿ ಬಸಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ಇಂತಹ ಸ್ಥಿತಿಯಲ್ಲಿ ಬಸಪ್ಪನಿಗೆ ನೆರವಾಗಿದ್ದು, ನರೇಗಾ ಯೋಜನೆ. ಇಂದು ಇವರೆಲ್ಲರಿಗೂ ನರೇಗಾ ಯೋಜನೆ ಜೀವನ ನಡೆಸಲು ಸಹಕಾರಿಯಾಗಿದೆ.
ಈ ರೀತಿಯ ವಿಶೇಷ ವ್ಯಕ್ತಿಗಳಿಗೆ ಕೆಲಸ ನೀಡಲು ಕಾರಣ ಹಾವೇರಿ ಜಿಲ್ಲಾ ಪಂಚಾಯತ್ ಸಿಇಒ ಮಹ್ಮದ್ ರೋಷನ್ ಎಂದು ಉದ್ಯೋಗ ಖಾತ್ರಿ ಯೋಜನೆಯ ಸಂಯೋಜಕ ಕುಮಾರಯ್ಯ ಚಿಕ್ಕಮಠ ಅವರು ಹೇಳುತ್ತಾರೆ.
ಇದನ್ನೂ ಓದಿ : ಯಡಿಯೂರಪ್ಪ, ಪುತ್ರ ವಿಜಯೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್