ಹಾವೇರಿ: ಡಿ ಕೆ ಶಿವಕುಮಾರ್‌ಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದ ಕಂದಾಯ ಸಚಿವ ಆರ್.ಅಶೋಕ ಹೇಳಿದರು. ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡದಲ್ಲಿ ದಲಿತರ ಮನೆಯಲ್ಲಿ ಉಪಹಾರ ಸೇವಿಸಿ ಮಾತನಾಡಿದ ಅವರು, ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲ ಆಯಾಮದಲ್ಲಿಯೂ ತನಿಖೆ ಮಾಡಿದ್ದಾರೆ. ಸ್ಫೋಟ ಮಾಡಿದವನು ಭಯೋತ್ಪಾದಕ, ಉಗ್ರಗಾಮಿ ಎಂದು ಸಾಬೀತಾಗಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆತನನ್ನು ಅಮಾಯಕ ಎಂದು ಹೇಳಿದ್ರೂ, ಭಯೋತ್ಪಾದನೆ ಮಾಡುವವರಿಗೆ ಅಮಾಯಕ ಎನ್ನುತ್ತಿರುವ ಕೆಪಿಸಿಸಿ ಅಧ್ಯಕ್ಷರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಕುಟುಕಿದರು.
ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಮಾಡುತ್ತಿದ್ದಾರೆ. ನಾನೂ ಸಹ ಕನಕದಾಸರ ಜನ್ಮಸ್ಥಳಕ್ಕೆ ಬಂದಿದ್ದೇನೆ. ಮೇಲು-ಕೀಳು ಎಂಬ ಭಾವನೆ ತೆಗೆದುಹಾಕಬೇಕು. ಎಲ್ಲ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕು. ಜನರಿಗೋಸ್ಕರ ಬಾಡ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡಿದ್ದೇನೆ. ಜಮೀನು ಖಾತಾ, ಪೌತಿ ಖಾತಾ ಯೋಜನೆ ಮಾಡಿರುವೆ ಎಂದು ತಿಳಿಸಿದರು.
ಕ್ಷೇತ್ರ ಜನರ ಪ್ರೀತಿಗೆ ಬೊಮ್ಮಾಯಿ ಬಾವುಕ ವಿಚಾರ: ಸಿಎಂ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದಲ್ಲಿ ಜನರ ಪ್ರೀತಿ ನೋಡಿ ಕಣ್ಣೀರು ಹಾಕಿದ್ದನ್ನು ನೋಡಿದರೆ ಅವರು ಕ್ಷೇತ್ರದ ಮೇಲೆ ಎಷ್ಟು ಅಭಿಮಾನ ಇಟ್ಟಿದ್ದಾರೆ ಎಂದು ಗೊತ್ತಾಗುತ್ತದೆ. ಎಸ್ಸಿ-ಎಸ್ಟಿ ಭೂಮಿ ಖರೀದಿಗೆ ಅವಕಾಶ ನೀಡಲಾಗಿದೆ. ಗ್ರಾಮ ವಾಸ್ತವ್ಯದಿಂದ ಸಾಕಷ್ಟು ಕಲಿತಿದ್ದೇನೆ. ಬಡವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಅಶೋಕ್ ಭರವಸೆ ನೀಡಿದರು.
ಸರ್ಕಾರದಿಂದ ಪಾರದರ್ಶಕ ಆಡಳಿತ: ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರಕಾರ ಕ್ಲೀನ್ ಸರಕಾರ. ವಿರೋಧ ಪಕ್ಷದವರು ಸುಮ್ಮನೆ ವಿರೋಧ ಮಾಡುತ್ತಾ ಬಂದಿದ್ದಾರೆ. ಅವರ ಬಳಿ ಆದರೆ ಯಾವುದೇ ದಾಖಲೆ ಇಲ್ಲ. ಸರಕಾರ ಬೇರೆ ಬೇರೆ ಸಮುದಾಯಗಳಿಗೆ ಮೀಸಲಾತಿ ನೀಡುವ ಉದ್ದೇಶ ಹೊಂದಿದೆ. ಎಸ್ಸಿ-ಎಸ್ಟಿ ಮೀಸಲು ಹೆಚ್ಚಿಸಿದೆ. ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಎಲ್ಲರಿಗೂ ಸ್ಪಂದಿಸಿದ್ದಾರೆ. ಆದರೆ ವಿರೋಧ ಪಕ್ಷದವರು ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ ಮಾಡುತ್ತಿವೆ. ನಾವು ಜೇನುತುಪ್ಪ ಸುರಿಸುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂಓದಿ:ಎಂಇಎಸ್ ಪುಂಡರನ್ನು ಹದ್ದುಬಸ್ತಿನಲ್ಲಿಡಲು ನಮಗೆ ಗೊತ್ತಿದೆ: ಸಿಎಂ