ಹಾವೇರಿ : ಉಕ್ರೇನ್ನಲ್ಲಿ ಮೃತಪಟ್ಟ ನವೀನ್ ಪಾರ್ಥಿವ ಶರೀರ ನಾಳೆ(ಸೋಮವಾರ) ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿಗೆ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ನವೀನ್ ನಿವಾಸಕ್ಕೆ ಹಾವೇರಿ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿದರು. ಅಲ್ಲದೇ, ಪೂಜೆ, ಸಾರ್ವಜನಿಕ ದರ್ಶನದ ವ್ಯವಸ್ಥೆ ಸೇರಿ ವಿವಿಧ ವಿಚಾರಗಳ ಕುರಿತು ಕುಟುಂಬಸ್ಥರ ಜತೆ ಚರ್ಚಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್, ನಾಳೆ ಬೆಳಗಿನ ಜಾವ ನವೀನ್ ಮೃತದೇಹ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದೆ. ರಾಣೆಬೆನ್ನೂರು ತಹಶೀಲ್ದಾರ್ ಹಾಗೂ ನವೀನ್ ಸಹೋದರ ಮತ್ತು ಗ್ರಾಮದ ಕೆಲವರು ಪಾರ್ಥಿವ ಶರೀರ ಬರಮಾಡಿಕೊಳ್ಳಲು ಬೆಂಗಳೂರಿಗೆ ತೆರಳಲಿದ್ದಾರೆ. ನಿಲ್ದಾಣದಿಂದ ಆ್ಯಂಬುಲೆನ್ಸ್ ಮೂಲಕ ಮೃತದೇಹ ತರುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಪಾರ್ಥಿವ ಶರೀರವನ್ನು ನವೀನ್ ನಿವಾಸದ ಮುಂದೆ 2-3 ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ ಮೆರವಣಿಗೆ ನಡೆಯಲಿದೆ. ಕುಟುಂಬದವರ ಇಚ್ಛೆಯಂತೆ ಮೃತದೇಹವನ್ನ ದಾವಣಗೆರೆಯ ಎಸ್ ಎಸ್ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗುವುದು ಎಂದರು.
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ನವೀನ್ ಮೃತದೇಹ ಅಂತಿಮ ದರ್ಶನ ಮತ್ತು ಮೆರವಣಿಗೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಸಾರ್ವಜನಿಕ ದರ್ಶನ ಹಾಗೂ ಮೆರವಣಿಗೆಗೆ ಸೂಕ್ತ ಬಂದೋಬಸ್ತ್ಗಾಗಿ 200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.