ರಾಣೆಬೆನ್ನೂರು : ಮಕ್ಕಳ ಕ್ಷೇತ್ರದಲ್ಲಿ ವಿಶೇಷವಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೀಡುವ ಗೌರವ ಪ್ರಶಸ್ತಿಗೆ ರಾಣೆಬೆನ್ನೂರಿನ ಲೇಖಕ, ಚಿತ್ರಕಾರ, ವನ್ಯಜೀವಿ ಛಾಯಾಗ್ರಾಹಕ ನಾಮದೇವ ಕಾಗದಗಾರ ಆಯ್ಕೆಯಾಗಿದ್ದಾರೆ.
ಮಕ್ಕಳ ಚಿತ್ರಕಲಾ ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದ ಸಾಧನೆ ಪರಿಗಣಿಸಿ 2018-19ನೇ ಸಾಲಿನ ಕರ್ನಾಟಕ ಬಾಲವಿಕಾಸ ಅಕಾಡೆಮಿ ಗೌರವ ಪ್ರಶಸ್ತಿಗೆ ನಾಮದೇವ ಕಾಗದಗಾರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷರಾದ ಈರಣ್ಣ ಶಿ ಜಡಿ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಫೆ.28 ರಂದು ಬೆಳಗ್ಗೆ 10ಗಂಟೆಗೆ ಧಾರವಾಡದ ಡಾ.ಮಲ್ಲಿಕಾರ್ಜನ್ ಮನ್ಸೂರ್ ಕಲಾ ಭವನದಲ್ಲಿ ಜರುಗಲಿದೆ. ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತು ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವರಾದ ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ ಮುಂತಾದವರು ಆಗಮಿಸಲಿದ್ದಾರೆ. ಸಾಹಿತಿಗಳು, ಕಲಾವಿದರು, ಗಣ್ಯರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಾಮದೇವ ಕಾಗದಗಾರ ಅವರು ವ್ಯಂಗ್ಯಚಿತ್ರ, ಪೇಂಟಿಂಗ್ ಹಾಗೂ ಛಾಯಾಚಿತ್ರಗಳ ಮೂಲಕ 12 ಅಂತಾರಾಷ್ಟ್ರೀಯ, 28 ರಾಷ್ಟ್ರೀಯ, 16 ರಾಜ್ಯ ಮಟ್ಟದ ಬಹುಮಾನವನ್ನು ಪಡೆದಿದ್ದಾರೆ. 'ದೇವರಿಗೂ ಬೀಗ' ಹಾಗೂ 'ನೆಲದ ನಂಟು' ಎಂಬ ಪುಸ್ತಕಗಳನ್ನು ಹೊರತಂದಿದ್ದಾರೆ. 2018 ರಲ್ಲಿ 22 ಅಡಿ ಉದ್ದದ ಕ್ಯಾನ್ವಾಸ್ ಮೇಲೆ ಸಾಮಾಜಿಕ ಜಾಗೃತಿ ಬಿಂಬಿಸುವ ಚಿತ್ರವನ್ನು ಪೆನ್ನಿನಿಂದ ಗೀಚುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ.