ಹಾವೇರಿ: ಈಗಾಗಲೇ ಕೇಂದ್ರ ಮುಖಂಡರಿಗೆ ನಾವು ಸಂದೇಶ ನೀಡಿದ್ದೇವೆ. ನಮ್ಮೆಲ್ಲರ ಸರ್ವ ಸಮ್ಮತಿ ನಾಯಕ ಮತ್ತು ಪಕ್ಷದ ಹಿರಿಯ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೇ ಆಗಿದ್ದಾರೆ. ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಬಯಸಿದರೆ ರಾಜೀನಾಮೆ ನೀಡುವೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದರು. ಬಿಎಸ್ವೈ ಅವರನ್ನು ಕೂಗಿ ಸಿಎಂ ಮಾಡಿಲ್ಲ. ರಾಜ್ಯದ ಎರಡು ಕೋಟಿ ಜನ ಆಶೀರ್ವಾದದಿಂದ ಅವರು ಸಿಎಂ ಆಗಿದ್ದಾರೆ. ರಾಜ್ಯದಲ್ಲಿ ನಾಯಕತ್ವದ ಮತ್ತು ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು.
ಈ ಕುರಿತಂತೆ ಚರ್ಚೆ ನಡೆಸುವುದು ಅಪ್ರಸ್ತುತ. ಸಿಎಂ ಹೈಕಮಾಂಡ್ ಬಯಸಿದರೆ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿರುವುದು ಉತ್ತಮ ಸಂದೇಶ. ಇದು ಬಿಜೆಪಿ ವಿಶಿಷ್ಟತೆ ಎಂದು ಯಡಿಯೂರಪ್ಪ ಅವರ ಹೇಳಿಕೆಯನ್ನು ಕಟೀಲ್ ಸಮರ್ಥಿಸಿಕೊಂಡರು.
ಯತ್ನಾಳ್ ಮೇಲೆ ಮೂರು ಹಂತದ ಕ್ರಮ
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷವಿರೋಧಿ ಹೇಳಿಕೆ ಕುರಿತಂತೆ ಮಾತನಾಡಿದ ಕಟೀಲ್, ಶಾಸಕರೊಬ್ಬರ ಮೇಲೆ ಮೂರು ತರಹದ ಕ್ರಮ ಕೈಗೊಳ್ಳುವ ಪದ್ಧತಿ ಬಿಜೆಪಿಯಲ್ಲಿದೆ. ಇದಕ್ಕಾಗಿ ಶಿಸ್ತು ಸಮಿತಿ ಇದೆ. ಈಗಾಗಲೇ ಅವರ ಮೇಲೆ ಒಂದು ಹಂತದ ಕ್ರಮ ಕೈಗೊಳ್ಳಲಾಗಿದೆ. ಯತ್ನಾಳ್ ತಪ್ಪುಗಳನ್ನು ಮಾಡುತ್ತಾ ಹೋದರೆ ಮುಂದಿನ ಕ್ರಮವನ್ನ ಕೇಂದ್ರ ತೆಗೆದುಕೊಳ್ಳಲಿದೆ ಎಂದು ನಳಿನ್ ಎಚ್ಚರಿಕೆ ರವಾನಿಸಿದರು.
ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿದೆ
ಕೇಂದ್ರ ಸರ್ಕಾರ ಕೋವಿಡ್ ಮತ್ತು ಬೆಲೆ ಏರಿಕೆ ಎರಡನ್ನೂ ನಿಯಂತ್ರಣ ಮಾಡುತ್ತಿದೆ. ಆದಷ್ಟು ಬೇಗ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿದೆ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದು, ವಿರೋಧ ಮಾಡುವುದೇ ಅವರ ಗುಣ ಎಂದು ಕಟೀಲ್ ವ್ಯಂಗ್ಯವಾಡಿದರು.