ಹಾವೇರಿಯಲ್ಲಿ ನಾಗರ ಪಂಚಮಿ ಸಡಗರ .. ಸಂಭ್ರಮ.. - Nagara Panchami celebration in Haveri
ಹಾವೇರಿಯಲ್ಲಿ ಮೊದಲ ದಿನ ಮಣ್ಣಿನ ನಾಗಪ್ಪನಿಗೆ ಹಾಲೆರೆಯುವವರು ಮರುದಿನ ನಾಗಬನಗಳಲ್ಲಿನ ಕಲ್ಲಿನ ನಾಗಪ್ಪಗೆ ಹಾಲೆರೆಯುತ್ತಾರೆ. ಮೊದಲ ದಿನ ನಾಗಬನಗಳಿಗೆ ಹಾಲೆರೆಯುವವರು ಮರುದಿನ ಮನೆಯಲ್ಲಿರುವ ಮಣ್ಣಿನ ನಾಗಪ್ಪಗೆ ಹಾಲೆರೆಯುತ್ತಾರೆ.
ಹಾವೇರಿ: ಜಿಲ್ಲೆಯಾದ್ಯಂತ ನಾಗರ ಪಂಚಮಿ ಸಡಗರ ಮನೆ ಮಾಡಿದೆ. ಇಂದು ರೊಟ್ಟಿ ಪಂಚಮಿ ಆಚರಿಸಲಾಗುತ್ತಿದ್ದು, ಗುರುವಾರ ಮತ್ತು ಶುಕ್ರವಾರ ನಾಗಪ್ಪನಿಗೆ ಹಾಲು ಎರೆಯಲಾಗುತ್ತದೆ.
ಗುರುವಾರ ಮನೆಯಲ್ಲಿ ಮಣ್ಣಿನ ನಾಗಪ್ಪನ ಪೂಜೆಸುವ ಜನರು ನಂತರ ಉಂಡಿ(ಲಾಡು) ಗಳ ನೈವೇದ್ಯ ಹಿಡಿಯುತ್ತಾರೆ. ಇನ್ನು ಕೆಲವರು ಗುರುವಾರ ನಾಗಬನಗಳಿಗೆ ತೆರಳಿ ಕಲ್ಲಿನ ನಾಗಪ್ಪನಿಗೆ ಹಾಲೆರೆಯುತ್ತಾರೆ. ಶುಕ್ರವಾರ ಮನೆಯಲ್ಲಿ ಮಣ್ಣಿನ ನಾಗಪ್ಪನ ಪ್ರತಿಷ್ಠಾಪಿಸಿ ಹಾಲೆರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಕುಂಬಾರ ಕುಟುಂಬಗಳು ಮಣ್ಣಿನ ನಾಗಪ್ಪನ ಮೂರ್ತಿಗಳನ್ನ ಸಿದ್ದಪಡಿಸಿವೆ.
ನಗರದ ಪ್ರಮುಖ ಮಾರುಕಟ್ಟೆ ರಸ್ತೆಗಳಲ್ಲಿ ಮಣ್ಣಿನ ನಾಗಪ್ಪನ ಮಾರಾಟ ಮಾಡುವ ದೃಶ್ಯಗಳು ಕಂಡು ಬಂದವು. ಮಣ್ಣಿನಿಂದ ಮಾಡಿದ ಬಣ್ಣದ ಅಲಂಕಾರವಿಲ್ಲದ ನಾಗಪ್ಪನ ಮೂರ್ತಿಗಳು, ಒಂದು ಹೆಡೆ ಇರುವ ನಾಗಪ್ಪನ ಮೂರ್ತಿಗಳು, ಐದು ಹೆಡೆ ಇರುವ ನಾಗಪ್ಪನ ಮೂರ್ತಿಗಳನ್ನು ಕುಂಬಾರ ಕುಟುಂಬಗಳು ಮಾರಾಟಮಾಡುತ್ತವೆ.
ಮಣ್ಣಿನ ನಾಗಪ್ಪಗೆ ಹಾಲು: ಜಿಲ್ಲೆಯಲ್ಲಿ ಮೊದಲ ದಿನ ಮಣ್ಣಿನ ನಾಗಪ್ಪನಿಗೆ ಹಾಲೆರೆಯುವವರು ಮರುದಿನ ನಾಗಬನಗಳಲ್ಲಿನ ಕಲ್ಲಿನ ನಾಗಪ್ಪಗೆ ಹಾಲೆರೆಯುತ್ತಾರೆ. ಮೊದಲ ದಿನ ನಾಗಬನಗಳಿಗೆ ಹಾಲೆರೆಯುವವರು ಮರುದಿನ ಮನೆಯಲ್ಲಿರುವ ಮಣ್ಣಿನ ನಾಗಪ್ಪಗೆ ಹಾಲೆರೆಯುತ್ತಾರೆ. ನಾಗರ ಪಂಚಮಿಯ ಈ ದಿನಗಳಲ್ಲಿ ಮನೆಯಲ್ಲಿ ವೈವಿಧ್ಯಮಯ ಉಂಡಿ ತಯಾರಿಸಿ ಸಂಭ್ರಮಿಸುತ್ತಾರೆ.
ಕರಿನೆರಳಿನ ಮಧ್ಯದಲ್ಲಿ ಪಂಚಮಿ: ಮಕ್ಕಳು ಮತ್ತು ಹೆಂಗಳೆಯರು ಜೋಕಾಲಿ ಆಡುವುದರಲ್ಲಿ ಮಗ್ನರಾದರೆ, ಇತ್ತ ಜಾನಪದ ಸೊಗಡಿನ ಕ್ರೀಡೆಗಳ ಸ್ಪರ್ಧೆಗಳನ್ನ ಆಯೋಜಿಸಲಾಗಿರುತ್ತದೆ. ಕಳೆದ ವರ್ಷದಿಂದ ಕೊರೊನಾ ಕರಿನೆರಳು ಪಂಚಮಿ ಆಚರಣೆ ಮೇಲೆ ಬಿದ್ದಿದೆ. ಆದರೆ, ಜನರು ಮಾತ್ರ ಕೊರೊನಾ ಕರಿನೆರಳಿನ ಮಧ್ಯದಲ್ಲಿ ಪಂಚಮಿ ಆಚರಣೆಯ ಸಂಭ್ರಮದಲ್ಲಿದ್ದಾರೆ.
ಓದಿ: ಪಂಚಮಸಾಲಿ ಸಮಾಜದ ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ : ಜಯ ಮೃತ್ಯುಂಜಯ ಮಹಾಸ್ವಾಮೀಜಿ