ಹಾವೇರಿ: ಪಟ್ಟಣದ ಸುಭಾಷ್ವೃತ್ತದ ಬಳಿ ಸ್ಥಾಪಿಸಿರುವ ಹಾವೇರಿ ಕಾ ರಾಜಾ ಗಣಪತಿ ಕೋಮು ಸಾಮರಸ್ಯ ಸಾರುತ್ತಿದೆ. ಗಣಪತಿ ನಿಮಜ್ಜನಕ್ಕೆ ಕಳೆದ ಐದು ವರ್ಷಗಳಿಂದ ಬೃಹತ್ ಹಾರವನ್ನ ಮುಸ್ಲಿಂ ಪುಷ್ಪ ಕಲಾವಿದರಾದ ಪಯಾಜ್ ಮತ್ತು ದಾದಾಪೀರ್ ಅರ್ಪಿಸುತ್ತಿದ್ದಾರೆ.
ಕಳೆದ ಐದು ವರ್ಷಗಳ ಹಿಂದೆ ಪುಷ್ಪದ ಹಾರ ಅರ್ಪಿಸುತ್ತಿದ್ದ ಈ ಕಲಾವಿದರು ಕಳೆದೆರಡು ವರ್ಷಗಳಿಂದ ಸೇಬು ಹಣ್ಣಿನ ಮಾಲೆಯನ್ನ ಅರ್ಪಿಸುತ್ತಿದ್ದಾರೆ. ಪ್ರಸ್ತುತ ವರ್ಷ ಸುಭಾಸ್ವೃತ್ತದಲ್ಲಿ ಸುಮಾರು 16 ಅಡಿ ಎತ್ತರದ ಗಣೇಶ ಮೂರ್ತಿಯನ್ನ ಸ್ಥಾಪಿಸಲಾಗಿದೆ. ಅದಕ್ಕೆ ತಕ್ಕಂತ ಪಯಾಜ್ ಮತ್ತು ದಾದಾಪೀರ್ ಎಂಟು ಜನ ಕೆಲಸದವರನ್ನ ಕರೆದುಕೊಂಡು ಸೇಬುಹಣ್ಣಿನ ಹಾರ ತಯಾರಿಸಿದ್ದಾರೆ.
ಸುಮಾರು 15 ಅಡಿ ಎತ್ತರವಿರುವ ಸೇಬಿನಹಾರಕ್ಕೆ ಎರಡೂವರೆ ಕ್ವಿಂಟಲ್ ಸೇಬು ಹಣ್ಣು ಬಳಸಲಾಗಿದೆ. ಪ್ರತಿವರ್ಷ ಐದು ಏಳು ಎಳೆಗಳಲ್ಲಿ ಕಟ್ಟಲಾಗುತ್ತಿದ್ದ ಮಾಲೆಯನ್ನ ಈ ವರ್ಷ ಒಂಬತ್ತು ಎಳೆಗಳಿಂದ ರಚಿಸಲಾಗಿದೆ. ಪಯಾಜ್ ಹಾವೇರಿಯ ಗೂಗಿಕಟ್ಟಿ ಬಳಿ ಐಹೆಚ್‌ಬಿ ಹೆಸರಿನ ಪ್ಲವರ್ ಮರ್ಚೆಂಟ್ ಅಂಗಡಿ ಇಟ್ಟುಕೊಂಡು ಗುಲಾಬಿ, ಸುಗಂಧಿ ಸೇರಿದಂತೆ ವಿವಿಧ ಪುಷ್ಪಗಳಿಂದ ಮಾಲೆ ತಯಾರಿಸಿಕೊಂಡು ಬಂದಿದ್ದಾರೆ.
ಕಳೆದ ಐದು ವರ್ಷಗಳಿಂದ ಸುಭಾಸ್ ವೃತ್ತದ ಗಣಪತಿಗೆ ಹಾರವನ್ನ ನಾವು ತಯಾರಿಸುತ್ತಿದ್ದೇವೆ. ಆವಾಗಿನಿಂದ ತಮಗೆ ಒಳ್ಳೆಯದಾಗುತ್ತಾ ಬಂದಿದೆ ಎನ್ನುತ್ತಾರೆ ಈ ಸಹೋದರರು. ಇನ್ನು ಈ ಬೃಹತ್ ಮಾಲೆ ತಯಾರಿಸಲು ಈ ಕಲಾವಿದರು ಹಣ ಪಡೆಯುವುದಿಲ್ಲ. ಗಣೇಶ ಸಮಿತಿಯವರು ತರಿಸಿಕೊಟ್ಟ ಹಣ್ಣು ಮತ್ತು ಪುಷ್ಪಗಳಿಂದ ಪಯಾಜ್ ಮಾಲೆ ತಯಾರಿಸಿಕೊಂಡು ಬಂದಿದ್ದಾರೆ.
ಪ್ರಸ್ತುತ ವರ್ಷ 16 ಗಂಟೆಗೂ ಅಧಿಕ ಕಾಲ ಕೆಲಸ ಮಾಡಿ ಸೇಬು ಮಾಲೆಯನ್ನ ತಯಾರಿಸಿದ್ದಾರೆ. ಈ ಕೆಲಸ ತಮಗೆ ಸಂತಸ ತರುತ್ತದೆ. ಹೆಚ್ಚಿನ ಉತ್ಸಾಹ ಬರುತ್ತದೆ ಎನ್ನುತ್ತಾರೆ ದಾದಾಪೀರ್. ಪ್ರತಿವರ್ಷ ಗಣಪತಿ ಸ್ಥಾಪನೆ ಮಾಡಿ 13 ದಿನಗಳಿಗೆ ಸುಭಾಸ್ ವೃತ್ತದ ಗಣೇಶ ನಿಮಜ್ಜನ ಮಾಡಲಾಗುತ್ತದೆ. ಈ ವರ್ಷ ಸಹ ಸೋಮವಾರ ಗಣೇಶ ನಿಮಜ್ಜನ ಮಾಡಲಾಗುತ್ತಿದ್ದು, ಈ ಕ್ರೇನ್‌ನಲ್ಲಿ ಮಾಲೆಯನ್ನ ಸಿದ್ದಪಡಿಸಲಾಗುತ್ತದೆ. ಈ ರೀತಿ ಸಿದ್ದಪಡಿಸಿರುವ ಮಾಲೆ ದಾರಿಹೋಕರನ್ನ ಆಕರ್ಷಿಸುತ್ತಿದ್ದು, ಸಾರ್ವಜನಿಕರು ಮಾಲೆ ಮುಂದೆ ನಿಂತು ಪೋಟೋ ತೆಗೆಸಿಕೊಳ್ಳುತ್ತಿದ್ದಾರೆ.
ಗಣೇಶನಿಗೆ ಮಾಲಾರ್ಪಣೆ ಮಾಡುವ ಮುನ್ನ ಕ್ರೇನ್ ಮೂಲಕ ಹಾವೇರಿ ನಗರದ ಪ್ರಮುಖ ಬೀದಿಗಳಲ್ಲಿ ಜಾಂಜ್ ಮೂಲಕ ಮಾಲೆಯ ಮೆರವಣಿಗೆ ಮಾಡಲಾಯಿತು. ನಂತರ ಗಣೇಶನಿಗಾಗಿ ತಯಾರಿಸಿದ ವಿಶೇಷ ಮಂಟಪಕ್ಕೆ ಸೇಬುಹಣ್ಣಿನ ಮಾಲೆ ಹಾಕಲಾಯಿತು. ಸೇಬು ಹಣ್ಣಿನ ಮಾಲೆಯ ಅಲಂಕಾರದಲ್ಲಿ ಗಣೇಶನ ಸೌಂದರ್ಯ ಮತ್ತಷ್ಟು ಆಕರ್ಷಕವಾಗಿತ್ತು.
ಓದಿ: ಮುಸ್ಲಿಂ ವ್ಯಕ್ತಿಯಿಂದ ದೇವಾಲಯ ನಿರ್ಮಾಣ: ಕೋಮು ಸೌಹಾರ್ದತೆಗೆ ಸಾಕ್ಷಿಯಾದ ರಾಮನಗರ