ಹಾವೇರಿ: ಸರ್ಕಾರ ರಾಜ್ಯದ ಎಲ್ಲ ತಾಲೂಕುಗಳನ್ನೂ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಿ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ. ಹಾವೇರಿಯಲ್ಲಿಂದು ಮಾತನಾಡಿದ ಅವರು, ನೀರು, ಮೇವು ಕೊರತೆ ಇರುವಲ್ಲಿ ಕೂಡಲೇ ಅವುಗಳನ್ನು ಪೂರೈಸುವ ಕ್ರಮ ಆಗಲಿ. ಇಂತಹ ಸಮಯದಲ್ಲಿ ಆಡಂಬರದ ಯೋಜನೆ ವ್ಯರ್ಥ. ಅದೇ ಹಣವನ್ನು ಬರಗಾಲ ನಿವಾರಿಸಲು ವಿನಿಯೋಗ ಮಾಡಲಿ ಎಂದು ಸಲಹೆ ನೀಡಿದರು.
ಜಾತಿ ಗಣತಿ ದುರುದ್ದೇಶವಿಲ್ಲದೇ ವೈಜ್ಞಾನಿಕವಾಗಿದ್ದರೆ ಎಲ್ಲ ಸಮುದಾಯದವರಿಗೂ ಒಳಿತು. ಎಲ್ಲ ಸಮುದಾಯದವರೂ ಒಪ್ಪುತ್ತಾರೆ. ಆದರೆ, ಅದು ಅವೈಜ್ಞಾನಿಕವಾಗಿದ್ದರೆ ನಿರಾಶೆಯಾಗುತ್ತದೆ. ಈ ಕುರಿತಂತೆ ನಾನು ಹೆಚ್ಚು ಅಧ್ಯಯನ ಮಾಡಿಲ್ಲ. ಜಾತಿ ಗಣತಿ ಬಹಿರಂಗಕ್ಕೆ ಮುನ್ನ ಎಲ್ಲ ಸಮುದಾಯವರ ವಿಶ್ವಾಸ ತಗೆದುಕೊಂಡು ರಾಜ್ಯ ಸರ್ಕಾರ ಸಾಧಕ ಬಾಧಕ ಚರ್ಚೆ ಮಾಡಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಸನಾತನ ಧರ್ಮದ ಬಗ್ಗೆ ನೀಡಲಾದ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಯಾವುದೇ ಧರ್ಮವನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ. ಭಾರತ ಬಹುಮುಖಿ ಸಂಸ್ಕೃತಿಯ ರಾಷ್ಟ್ರ. ಎಲ್ಲ ಧರ್ಮಗಳನ್ನು ಪ್ರೀತಿಯಿಂದ ಕಂಡಂತಹ ದೇಶ. ಧರ್ಮದಲ್ಲಿ ತಾತ್ವಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ, ಎಲ್ಲ ಧರ್ಮಗಳ ಮೂಲ ಉದ್ದೇಶ ಸಕಲ ಜೀವರಾಶಿಗಳ ಲೇಸು ಬಯಸುವುದೇ ಆಗಿದೆ. ಯಾವುದೇ ವ್ಯಕ್ತಿ, ಯಾವುದೇ ಧರ್ಮ ನಾಶಮಾಡುವಂತಹ ಶಬ್ದ ಬಳಸಬಾರದು ಎಂದರು.
ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆಯಿಂದ ಏನಾದರೂ ಅನ್ನಿಸಿದರೆ ಸಿಎಂ ಸರಪಡಿಸುವ ಕೆಲಸ ಮಾಡಬೇಕು. ಅವರು ಹೇಳಿದಂತೆ ನಮ್ಮ ಸಮಾಜದ ಶಾಸಕರು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಬೇಕು. ಕ್ರೀಯಾಶೀಲ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಅನ್ಯಾಯವಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಮೂಲೆಗುಂಪು ಮಾಡದೇ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಬೇಕು ಎಂದು ಹೇಳಿದರು.
ಮೂರು ಉದ್ದೇಶಗಳಿಗಾಗಿ ಇಷ್ಟಲಿಂಗ ಹೋರಾಟ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರಿಗೆ ಮೀಸಲಾತಿ ಘೋಷಣೆ ಮಾಡುವ ಶಕ್ತಿಯನ್ನು ಭಗವಂತ ನೀಡಲಿ. ಸತತ ಮೂರು ವರ್ಷದಿಂದ ಹೋರಾಟ ಮಾಡುತ್ತಿರುವ ನಮ್ಮ ಸಮಾಜದವರಿಗೂ ಶಕ್ತಿ ದೊರೆಯಲಿ. ದೇಶಕ್ಕೆ ಬಂದಿರುವ ಬರಗಾಲದ ಬವಣೆ ನೀಗಲಿ, ಹಸಿರು ಪಸರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದ ಶ್ರೀಗಳು, ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಭಾಗವಹಿಸುವಂತೆ ನಾನು ಯಾರನ್ನೂ ಒತ್ತಾಯಿಸುವುದಿಲ್ಲ ಎಂದರು.
ನಮ್ಮ ಕಾರ್ಯಸಿದ್ಧಿಗಾಗಿ ಇದೇ 13 ರಂದು ಧಾರವಾಡ ಜಿಲ್ಲೆ ಗಬ್ಬೂರದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಷ್ಟಲಿಂಗ ಪೂಜೆ ಮಾಡಲಾಗುವುದು. ಪಂಚಮಸಾಲಿ ಸಮಾಜಕ್ಕೆ 2ಎ ಸಿಗುವವರೆಗೆ ಜಿಲ್ಲಾಮಟ್ಟದ ಹೋರಾಟ ಮಾಡುತ್ತೇವೆ. ಜಿಲ್ಲಾ ಮಟ್ಟದ ಹೋರಾಟದಲ್ಲಿ ಸರ್ಕಾರ 2ಎ ಮೀಸಲಾತಿ ಸಿಗದಿದ್ದರೆ ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ಕೂಡಲಸಂಗಮದಲ್ಲಿ ಯಾವುದಾದರೂ ಸ್ಥಳದಲ್ಲಿ ರಾಜ್ಯಮಟ್ಟ ಹೋರಾಟ ಮಾಡುತ್ತೇವೆ. ಲೋಕಸಭೆ ಚುನಾವಣೆಗೆ ಮುನ್ನವೇ ಮೀಸಲಾತಿ ಪ್ರಕಟ ಮಾಡಿದರೆ ಒಳ್ಳೆಯದು. ಇಲ್ಲಿಯೂ ಸಹ ಸರ್ಕಾರ ಘೋಷಣೆ ಮಾಡದಿದ್ದರೆ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆ ರಚಿಸುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಅಧಿಕಾರ ವಿಕೇಂದ್ರೀಕರಣ, ಮಹಿಳಾ ಮೀಸಲಾತಿಗೆ ಮುನ್ನುಡಿ ಬರೆದವರು ರಾಜೀವ್ ಗಾಂಧಿ: ಸಿಎಂ ಸಿದ್ದರಾಮಯ್ಯ