ಹಾವೇರಿ: ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಮಡಿದ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಮನೆಗೆ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಭಾನುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನವೀನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಅವರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ವಿತರಿಸಿದರು. ಬಳಿಕ ಮಾತನಾಡಿದ ಅವರು, ನವೀನ್ ಸಾವು ಸಾಕಷ್ಟು ನೋವು ತಂದಿದೆ. ನವೀನ್ ಪೋಷಕರದ್ದು ಪ್ರಮುಖ ಬೇಡಿಕೆ ಮೃತದೇಹ ತರಬೇಕು ಎನ್ನುವುದಾಗಿದೆ. ಅದರಂತೆ ಸರ್ಕಾರ ಕಾರ್ಯ ಪ್ರವೃತ್ತವಾಗಿದ್ದು, ಆದಷ್ಟು ಬೇಗ ನವೀನ್ ಅವರ ಪಾರ್ಥಿವ ಶರೀರ ತರಲಿದ್ದೇವೆ ಎಂದು ಭರವಸೆ ನೀಡಿದರು.
ಉಕ್ರೇನ್ ಮತ್ತು ರಷ್ಯಾ ಆಂತರಿಕ ಕಲಹಕ್ಕೆ ಹಾವೇರಿ ಜಿಲ್ಲೆಯ ಯುವಕ ಬಲಿಯಾಗಿರುವುದು ನೋವಿನ ವಿಚಾರ. ರಾಜ್ಯ ಮತ್ತು ಕೇಂದ್ರ ಸರ್ಕಾರ ನವೀನ್ ಮನೆಯ ಸದಸ್ಯರೆಂದು ತಿಳಿದುಕೊಂಡು ಅವನ ಪಾರ್ಥಿವ ಶರೀರ ತರುವ ಕೆಲಸ ಮಾಡುತ್ತೇವೆ. ದೇವರು ನವೀನ್ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಗಲಿಕೆಯ ನೋವನ್ನ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಓದಿ: ರಾಮನಗರ: ಚುಂಚಿ ಫಾಲ್ಸ್ ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು