ರಾಣೇಬೆನ್ನೂರು(ಹಾವೇರಿ): ಹಲ್ಲಿ ಬಿದ್ದ ಆಹಾರ ಸೇವಿಸಿ 80 ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ರಾಣೆಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡದಲ್ಲಿ ನಡೆದಿದೆ.
ವೆಂಕಟಾಪುರ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಹಲ್ಲಿ ಬಿದ್ದಿದ್ದ ಮಧ್ಯಾಹ್ನದ ಬಿಯೂಟವನ್ನು ಸೇವಿಸಿ ಸುಮಾರು 80 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ರಾಣೆಬೆನ್ನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ 78 ಮಕ್ಕಳು ಆರೋಗ್ಯವಾಗಿದ್ದು, ಇಬ್ಬರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ವಿವರ:
ಇಂದು ಮಧ್ಯಾಹ್ನ 1.30ರ ಸುಮಾರಿಗೆ ಮಕ್ಕಳಿಗೆ ಬಿಸಿಯೂಟ ನೀಡಲಾಗಿದೆ. ಈ ವೇಳೆ ಬಾಲಕನೊಬ್ಬನ ತಟ್ಟೆಗೆ ಬಡಿಸಿದ ಸಾಂಬಾರ್‌ನಲ್ಲಿ ಹಲ್ಲಿ ಸಿಕ್ಕಿದೆ. ತಕ್ಷಣ ಬಾಲಕ ವಾಂತಿ ಮಾಡಿಕೊಂಡಿದ್ದಾನೆ. ನಂತರ ಎಲ್ಲಾ ವಿದ್ಯಾರ್ಥಿಗಳು ಗಾಬರಿಗೊಂಡ ಹಿನ್ನೆಲೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಾಗಿದೆ.