ಹಾವೇರಿ: ಗ್ರಾಮ ವಾಸ್ತವ್ಯ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಸರ್ಕಾರವೇ ಜನರ ಬಳಿ ತೆರಳಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ 12 ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದು, ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಅಲ್ಲದೇ 13 ನೇ ಗ್ರಾಮ ವಾಸ್ತವ್ಯವನ್ನು ಕನಕದಾಸರ ಜನ್ಮಭೂಮಿ ಬಾಡ ಗ್ರಾಮದಲ್ಲಿ ಮಾಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದರು.
ಈ ಗ್ರಾಮದಲ್ಲಿ 24 ಗಂಟೆಗಳ ಕಾಲ ಇರುವ ಮೂಲಕ ಗ್ರಾಮಸ್ಥರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತೇನೆ. ಸಾಧ್ಯವಾದ ಮಟ್ಟಿಗೆ ಸ್ಥಳದಲ್ಲೇ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ. ಅಲ್ಲದೇ 28 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿದ್ದೇನೆ. ನಿಮ್ಮ ಇದೇ ಕಾರ್ಯಗಳನ್ನು ಕಚೇರಿಗಳಲ್ಲಿ ಮಾಡಿಕೊಳ್ಳಲು 15 ದಿನಕ್ಕೂ ಅಧಿಕ ಕಾಲ ಬೇಕಾಗುತ್ತದೆ ಎಂದು ತಿಳಿಸಿದರು.
ನಂತರ ಟ್ರ್ಯಾಕ್ಟರ್ನಲ್ಲಿ ಸಚಿವರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾಮೇಳಗಳ ಪ್ರದರ್ಶನ ಗಮನ ಸೆಳೆಯಿತು. ಕುಂಭ ಹೊತ್ತ ಮಹಿಳೆಯರು ಗಮನ ಸೆಳೆದರು.
ಇದನ್ನೂ ಓದಿ:ಕಲಬುರಗಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: ಹತ್ತಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ