ಹಾವೇರಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇರಲಿ, ನೆಹರೂ ಇರಲಿ ಅಂತವರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ರು. ಹಾವೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅಂತಹ ನಾಯಕರನ್ನು ಪಕ್ಷಾತೀತವಾಗಿ ಗೌರವಿಸಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.
ಟೀಕೆ ಮಾಡುವುದನ್ನು ಬಿಟ್ಟು ಬೇರೆ ಕೆಲಸ ಬರುವುದಿಲ್ಲ:
ಬೆಂಗಳೂರಿನಲ್ಲಿ ನಿನ್ನೆ ನಡೆದ ಉದ್ಯಮಗಳ ಸಭೆಯಲ್ಲಿ ಸಿಎಂ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರೆ, ಅವರ ಮಗ ಉದ್ಯಮಿಯಾಗಿ ಪಾಲ್ಗೊಂಡಿದ್ದಾರೆ ಅದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನವರಿಗೆ ಟೀಕೆ ಮಾಡುವುದನ್ನು ಬಿಟ್ಟು ಬೇರೆ ಕೆಲಸ ಬರುವುದಿಲ್ಲ ಎಂದ್ರು.
ಭವಿಷ್ಯ ಹೇಳೋಕೆ ಶುರು ಮಾಡಿದ್ದಾರೆ:
ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯವನ್ನು ನಂಬದವರು. ಅಂತವರು ಇತ್ತೀಚೆಗೆ ಭವಿಷ್ಯ ಹೇಳಲು ಶುರು ಮಾಡಿದ್ದಾರೆ. ಅದನ್ನು ಯಾರಿಂದ ಕಲಿತರೋ ಗೊತ್ತಿಲ್ಲ ಎಂದು ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದರು. ರಾಜ್ಯದಲ್ಲಿ 118 ಬಿಜೆಪಿ ಶಾಸಕರಿದ್ದೇವೆ, ನಮ್ಮ ಸರ್ಕಾರ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ ಪೂರ್ಣಾವಧಿ ಪೂರೈಸಲಿದ್ದಾರೆ. 2023ರಲ್ಲಿ ಸಹ ಮತ್ತೆ ನಾವೇ ಅಧಿಕಾರಕ್ಕೆ ಬರಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೊರೊನಾ ವಾರಿಯರ್ಸ್‌ಗೆ ಸನ್ಮಾನ:
ಕೊರೊನಾ ಹಿನ್ನೆಲೆ ಮನರಂಜನೆ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿತ್ತು. ಇದೇ ವೇಳೆ ಕೊರೊನಾ ವಾರಿಯರ್ಸ್‌ಗೆ ಬಿ.ಸಿ.ಪಾಟೀಲ್ ಸನ್ಮಾನಿಸಿದರು. ನಾವು ಬ್ರಿಟೀಷರಿಂದ ಮುಕ್ತಿ ಪಡೆದಿದ್ದೇವೆ. ಆದರೆ ಕೊರೊನಾದಿಂದ ಮಾಸ್ಕ್‌ನಿಂದ ಮುಕ್ತಿ ಪಡೆದಿಲ್ಲ ಎಂದ್ರು. ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 75ನೇ ಸ್ವಾತಂತ್ರೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ಸಚಿವ ಬಿ.ಸಿ.ಪಾಟೀಲ್, ಗೌರವ ವಂದನೆ ಸಲ್ಲಿಸಿದರು. ಮಾಸ್ಕ್‌ನಿಂದ ಮುಕ್ತಿ ಪಡೆವ ಕುರಿತಂತೆ ನಾವು ಶಪಥ ಮಾಡುವ ಅನಿವಾರ್ಯತೆ ಇದೆ ಎಂದ್ರು.
ಕೊರೊನಾ ಮುಕ್ತದಿನಗಳು ಬರಲಿ:
ಹಾವೇರಿ ಜಿಲ್ಲಾಡಳಿತ ವಾತ್ಸಲ್ಯ ಯೋಜನೆ ಜಾರಿಗೆ ತಂದಿದೆ. ಮುಂದಿನ ಮೂರನೇ ಅಲೆ ಚಿಕ್ಕಮಕ್ಕಳಿಗೆ ಬರುವ ಸಂಭವ ಅಧಿಕವಾಗಿರುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಪಾಟೀಲ್ ತಿಳಿಸಿದರು. ಜಿಲ್ಲಾಡಳಿತ ಜಿಲ್ಲಾಸ್ಪತ್ರೆಯಲ್ಲಿ 30 ಮಕ್ಕಳ ಬೆಡ್ ಮತ್ತು ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 25 ಬೆಡ್ಗಳನ್ನ ಮಕ್ಕಳ ಬೆಡ್ಗಳಾಗಿ ನಿರ್ಮಿಸಲಾಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.ಆದಷ್ಟು ಬೇಗ ಕೊರೊನಾ ಮುಕ್ತದಿನಗಳು ಬರಲಿ ಎಂದು ಆಶಿಸಿದರು.
75 ಮೀಟರ್ ರಾಷ್ಟ್ರಧ್ವಜದ ತಿರಂಗ ಯಾತ್ರೆ:
75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ 75 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ತಿರಂಗ ಯಾತ್ರೆ ಮಾಡಲಾಯಿತು. ರಾಜನಹಳ್ಳಿ ವಾಲ್ಮೀಕಿ ಗುರಪೀಠದ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಪುಣ್ಯಕೋಠಿ ಮಠದ ಸ್ವಾಮೀಜಿಯವರು ಯಾತ್ರೆಗೆ ಚಾಲನೆ ನೀಡಿದರು.