ಹಾವೇರಿ : ಕೊರೊನಾ ನಿಯಮಗಳನ್ನು ಸಿನಿಮಾ ಉದ್ಯಮಕ್ಕೆ ಸಡಿಲಿಕೆ ಮಾಡಿರುವ ಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.
ಹಿರೇಕೆರೂರನಲ್ಲಿ ಮಾತನಾಡಿದ ಅವರು, ಕೊರೊನಾ ಕುರಿತು ಜನರು ಜಾಗೃತರಾಗುವುದು ಅವಶ್ಯ ಎಂದರು.
ಸಿಡಿ ಪ್ರಕರಣ ಕುರಿತಂತೆ ಪ್ರತಿ ಪಕ್ಷನಾಯಕ ಸಿದ್ದರಾಮಯ್ಯ ಮಾಡಿರುವ ಆರೋಪದ ಕುರಿತು ಮಾತನಾಡುತ್ತಾ, ಸಿದ್ದರಾಮಯ್ಯ ಹೇಳುವುದೆಲ್ಲಾ ವೇದಾಂತ ಅಲ್ಲ. ಮಾಜಿ ಸಚಿವ ಮೇಟಿ ಪ್ರಕರಣದಲ್ಲಿ ಅವರ ಸರ್ಕಾರವಿದ್ದಾಗ ಎಫ್ಐಆರ್ ಸಹ ದಾಖಲಾಗಿರಲಿಲ್ಲ. ನಾವು ಸಿಡಿ ಪ್ರಕರಣದಲ್ಲಿ ಎಸ್ಐಟಿ ನೇಮಕ ಮಾಡಿದ್ದೇವೆ. ಈಗಾಗಲೇ ವಿಚಾರಣೆ ನಡೆಸಿದ್ದೇವೆ. ಅವಶ್ಯಕತೆ ಬಿದ್ದರೆ, ಆರೋಪ ಸಾಬೀತಾದರೆ ಬಂಧನ ಸಹ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಸಿಡಿ ಲೇಡಿಗೆ ನಾನು ಯಾವುದೇ ಹಣ ವರ್ಗಾವಣೆ ಮಾಡಿಲ್ಲ: ಮಾಜಿ ಸಚಿವ ಡಿ. ಸುಧಾಕರ್
ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕುರಿತ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರು ಮೊದಲು ಕಾಮಾಲೆ ಕಣ್ಣಿನಿಂದ ನೋಡುವುದನ್ನು ಬಿಡಬೇಕು. ಉಪಚುನಾವಣೆ ಘೋಷಣೆಯಾಗಿರುವ ಕ್ಷೇತ್ರಗಳಲ್ಲಿ ವಿಜಯೇಂದ್ರ ಕೆಲಸ ಮಾಡುತ್ತಿದ್ದಾರೆ. ಮಾಜಿ ಕೇಂದ್ರ ಸಚಿವ ಯತ್ನಾಳ ಬಾಯಿಗೆ ಬೀಗ ಹಾಕುವವರು ಹಾಕುತ್ತಾರೆ ಎಂದರು.