ಹಾವೇರಿ: ಸಿಎಂ ಯಡಿಯೂರಪ್ಪನವರು ಖುರ್ಚಿಯಿಂದ ಇಳಿಯುವುದು ಖಚಿತವಾಗಿದೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಟಾಂಗ್ ನೀಡಿದ್ದು, ಅವರಿಗೇನು ಅಮಿತ್ ಷಾ ಫೋನ್ ಮಾಡಿದ್ರಂತಾ ಎಂದು ತಿರುಗೇಟು ನೀಡಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗುವುದು ಸಾಧ್ಯವಿಲ್ಲ ಎಂದೂ ಅವರು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿರುವ ಹೇಳಿಕೆಗೆ ಬೆಲೆ ಇದೆಯಾ, ಸಿದ್ದರಾಮಯ್ಯ ಬಿಜೆಪಿ ಪಕ್ಷನಾ, ಅವರು ವಿರೋಧ ಪಕ್ಷದ ನಾಯಕರು. ಏನಿದ್ದರೂ ನಮ್ಮ ಪಕ್ಷದ ವರಿಷ್ಠರು ಹೇಳಬೇಕು. ಆ ಪ್ರಶ್ನೆಯೇ ಇಲ್ಲ, ಎಲ್ಲವೂ ಊಹಾಪೋಹಗಳಷ್ಟೆ ಎಂದರು.
2023ಕ್ಕೆ ಮತ್ತೆ ಸಿಎಂ ಆಗುತ್ತೀನಿ ಎಂಬ ಕುಮಾರಸ್ವಾಮಿಯವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯವರು ಹಗಲು ಕನಸು ಕಾಣುತ್ತಿದ್ದಾರೆ. ಬಂದ ಭಾಗ್ಯವನ್ನು ಕಾಲಿಂದ ಒದ್ದಿದ್ದಾರೆ. 37 ಜನ ಮಂತ್ರಿಗಳನ್ನು ಇಟ್ಟುಕೊಂಡು ಮುಂತ್ರಿಸ್ಥಾನವನ್ನು ಸರಿಯಾಗಿ ನಿಭಾಯಿಸಲು ಆಗದ ಅವರು ಇನ್ನೇನು 2023ಕ್ಕೆ ಮುಖ್ಯಮಂತ್ರಿ ಆಗುತ್ತಾರಾ, ಅದೆಲ್ಲ ಕನಸು. 2023ಕ್ಕೆ ಬಿಜೆಪಿ ಪಕ್ಷ 150 ಸ್ಥಾನಗಳನ್ನು ಗೆದ್ದು ನಿಚ್ಚಳ ಬಹುಮತದಿಂದ ಸರ್ಕಾರ ಮಾಡುತ್ತದೆ ಎಂದರು.
ಓದಿ: ಮೈಸೂರು ಚಾಮುಂಡಿ ತಾಯಿ ದರ್ಶನ ಪಡೆದ ಸಿಎಂ ಯಡಿಯೂರಪ್ಪ
ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ಚಳುವಳಿ ವಿಚಾರ ಕುರಿತಂತೆ ಮಾತನಾಡಿದ ಅವರು, ಕೃಷಿ ಕಾಯ್ದೆ ವಿರೋಧಿಸುತ್ತಾರೆ ಅಂದರೆ ಕೃಷಿಕರನ್ನು, ರೈತರನ್ನು ವಿರೋಧಿಸ್ತಾರೆ ಅಂದರ್ಥ.ಈಗ ಬಂದಿರುವ ಎಪಿಎಂಸಿ, ಭೂಸುಧಾರಣೆ ಕಾಯ್ದೆಗಳು ರೈತರ ಪರವಾಗಿವೆ. ಅವುಗಳನ್ನು ವಿರೋಧ ಮಾಡ್ತಾರೆ ಅಂದ್ರೆ ಅವರನ್ನು ರೈತ ವಿರೋಧಿಗಳು ಎಂದು ಹೇಳಬೇಕಾಗುತ್ತದೆ ಎಂದರು.