ಹಾವೇರಿ: ರಾಜ್ಯದಲ್ಲಿ ಲಾಕ್ಡೌನ್ ಮುಂದುವರೆಸುವ ಕುರಿತಂತೆ ಶನಿವಾರ ನಿರ್ಧರಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಶನಿವಾರ ಸಿಎಂ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಪರೆನ್ಸ್ ನಡೆಸಲಿದ್ದಾರೆ. ನಂತರವಷ್ಟೆ ರಾಜ್ಯದಲ್ಲಿ ಲಾಕ್ಡೌನ್ ಮುಂದುವರೆಸಬೇಕೇ ಅಥವಾ ಬೇಡವೇ ಎಂಬುದು ನಿರ್ಧಾರವಾಗಲಿದೆ. ಈ ಕುರಿತಂತೆ ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದಿಲ್ಲ. ಆದರೂ ಸಹ ಕೊರೊನಾಗೆ ಬಿಡುಗಡೆಯಾದ ಹಣದಲ್ಲಿ ಹಾವೇರಿಯಲ್ಲಿ ಸಹ ಕೊರೊನಾ ಪರೀಕ್ಷೆಯ ಲ್ಯಾಬ್ ಆರಂಭಿಸುವ ಇಂಗಿತ ವ್ಯಕ್ತಪಡಿಸಿದರು. ಕೋವಿಡ್-19 ತಡೆಗಟ್ಟುವುದು ಕೇವಲ ಸರ್ಕಾರದದ ಕಾರ್ಯವಲ್ಲ. ಜನರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸಮುದಾಯಗಳು ಒಟ್ಟಾಗಿ ಹೋರಾಡಿದಾಗ ಮಾತ್ರ ಇಂತಹ ಹೋರಾಟದಲ್ಲಿ ಜಯ ಗಳಿಸುವುದು ಸಾಧ್ಯ ಎಂದರು.