ಹಾವೇರಿ: ಸಿದ್ದರಾಮಯ್ಯ ಅವರಿಗೆ ತಾವು ಮತ್ತೆ ಸಿಎಂ ಆಗಬೇಕು ಅನ್ನೋ ಹಂಬಲ, ಆಸೆಯಿದೆ. ಹೀಗಾಗಿ ಅವರು ಯಾವಾಗಲೂ ಸರ್ಕಾರ ಪತನವಾಗಲಿ ಎಂದು ಹೇಳುತ್ತಿರುತ್ತಾರೆ. ಸಚಿವರ, ಶಾಸಕ ರಾಜೀನಾಮೆ ಕೇಳುತ್ತಾರೆ. ಅವರ ಅವಧಿ ವೇಳೆ ಆದ ಘಟನೆಗಳಿಗೆ ರಾಜೀನಾಮೆ ನೀಡಿದ್ದಾರಾ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರಶ್ನಿಸಿದರು.
ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಆಗಬೇಕು ಎಂಬ ಆಸೆಯಿದೆ. ಅದಕ್ಕಾಗಿ ಎಲ್ಲದಕ್ಕೂ ರಾಜೀನಾಮೆ ಕೇಳ್ತಾರೆ. ಕೆ.ಜೆ.ಜಾರ್ಜ್ ಪ್ರಕರಣ ಆದಾಗ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟಿದ್ರಾ ಎಂದು ಕೇಳಿದರು.
ಪಿಎಸ್ಐ ಹಗರಣದಲ್ಲಿ ಸಚಿವ ಅಶ್ವತ್ಥನಾರಾಯಣ ಪರ ಬ್ಯಾಟಿಂಗ್ ಮಾಡಿದ ಸಚಿವ ಪಾಟೀಲ್, ಅವರ ಸಂಬಂಧಿಕರು ಯಾರೋ ಹಣ ಪಡೆದರು ಎಂದು ಅಶ್ವತ್ಥ್ ನಾರಾಯಣ ಹೊಣೆ ಮಾಡುವುದು ಸರಿಯಲ್ಲ ಎಂದರು.
ಮುಖ್ಯಮಂತ್ರಿ ಬದಲಿಲ್ಲ: ಅಮಿತ್ ಶಾ ಅವರು ಬಂದಾಗ ಸಿಎಂ ಬದಲಾವಣೆ ಆಗಲ್ಲ ಎಂದು ಹೇಳಿದ್ದಾರೆ. ಜೊತೆಗೆ ಅರುಣ್ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ ಕಟೀಲ್ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರೂ ಈ ಬಗ್ಗೆ ಹೇಳಿದ್ದಾರೆ. ಹಾಗಾಗಿ ನಾಯಕತ್ವ ಬದಲಾವಣೆ ಮಾತೇ ಇಲ್ಲ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ಇದನ್ನೂ ಓದಿ: ಬೊಮ್ಮಾಯಿ ಆಯ್ಕೆಯಾದ ಸಿಎಂ ಅಲ್ಲ, ನೇಮಕವಾದ ಸಿಎಂ: ಸಿದ್ದರಾಮಯ್ಯ