ಹಾವೇರಿ: ರಾಜ್ಯದಲ್ಲಿ ಲಾಕ್‌ಡೌನ್ ಮಾಡಬಾರದು ಎಂಬುದು ಸರ್ಕಾರದ ಉದ್ದೇಶ. ಆದರೆ ಜನರು ಕೊರೊನಾ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿ, ಸಹಕಾರ ನೀಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದಲ್ಲಿ ನಡೆದ 15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎರಡನೇ ಅಲೆ ಇದ್ದಾಗಲೂ ಸಹ ನಮ್ಮ ಸರ್ಕಾರ ಹೆಚ್ಚು ಲಾಕ್‌ಡೌನ್ ಮಾಡಲಿಲ್ಲ. ಇವತ್ತು ಸಹ ಲಾಕ್‌ಡೌನ್ ಮಾಡುವ ಪ್ರಮೇಯ ಇಲ್ಲ ಎಂದರು.
ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ಸಿನವರು ರಾಜಕೀಯ ಲಾಭ ಪಡೆದುಕೊಳ್ಳಲು ಹೊರಟಿದ್ದಾರೆ. ಈ ಹಿಂದೆ ಡಿ.ಕೆ.ಶಿವಕುಮಾರ್ 2013 ರಿಂದ 2018 ರವರೆಗೆ ನೀರಾವರಿ ಸಚಿವರಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಆ ವೇಳೆಯಲ್ಲಿ ಇವರು ಮೇಕೆದಾಟು ಹೆಸರೇಕೆ ಎತ್ತಲಿಲ್ಲ?. ಬಿಜೆಪಿ ಸರ್ಕಾರ ಮೇಕೆದಾಟು ಅನುಷ್ಠಾನಗೊಳಿಸುತ್ತದೆ ಎನ್ನುವ ವಾಸನೆ ಕಾಂಗ್ರೆಸ್ ಮುಖಂಡರಿಗೆ ಬಡಿದಿದೆ. ಹೀಗಾಗಿ ತಾವು ಧರಣಿ ಮಾಡಿದ್ದರಿಂದಲೇ ಮೇಕೆದಾಟು ಆಯಿತು ಎಂದು ತೋರಿಸಿಕೊಳ್ಳಲು ರಾಜಕೀಯ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೋವಿಡ್ ಬಗ್ಗೆ ಮಾತನಾಡಿದ ಸಚಿವರು, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಕ್ಕೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಕೋವಿಡ್ ಕಡಿಮೆಯಿದೆ. ಹಾಗಂತ ನಿರ್ಲಕ್ಷ್ಯ ಮಾಡುವಂತಿಲ್ಲ. ಹಾವೇರಿ ಜಿಲ್ಲೆಯಲ್ಲಿ ಒಮಿಕ್ರಾನ್ ಇದುವರೆಗೆ ಪತ್ತೆಯಾಗಿಲ್ಲ. ಒಂದು ವೇಳೆ ಪತ್ತೆಯಾದರೆ ಅದನ್ನೆದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ತಿಳಿಸಿದರು.