ರಾಣೆಬೆನ್ನೂರು: ನಗರದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದರಿಂದ ಮೂಗು ತೆರೆಯಲಾರದ ಸ್ಥಿತಿಯಲ್ಲಿ ಸಾರ್ವಜನಿಕರು ಓಡಾಡುವಂತಾಗಿದೆ.
ಹೌದು ರಾಣೆಬೆನ್ನೂರು ಬಸ್ ನಿಲ್ದಾಣ, ಹೆಸರಿಗೆ ಮಾತ್ರ ನಗರದ ನಿಲ್ದಾಣವಾಗಿದ್ದು, ಸಾರ್ವಜನಿಕರ ಶೌಚಾಲಯವಾಗಿದೆ. ಪ್ರಯಾಣಿಕರು ಅಥವಾ ಬಸ್‌ಗಾಗಿ ಕಾಯುತ್ತಿದ್ದವರಿಗೆ ಕೆಲ ಕಾಲ ತಲೆ ಸುತ್ತು ಬಂದು ವಾಂತಿ ಮಾಡಿ ಕೊಳ್ಳುವಂತಹ ಪರಿಸ್ಥಿತಿಗೆ ಬಂದು ನಿಂತಿದೆ.
ದಶಕಗಳ ಹಿಂದೆ ನಿರ್ಮಾಣವಾದ ಈ ಸುಸಜ್ಜಿತ ನಿಲ್ದಾಣ, ಕಳೆದ ಎರಡು ವರ್ಷಗಳಿಂದ ಪುಂಡ ಪೋಕರಿಗಳ ತಾಣವಾಗಿದೆ. ಎಲ್ಲೆಂದರಲ್ಲಿ ಅಡಕೆ ಎಲೆ ಉಗುಳು, ಶೌಚಾಲಯ ಇದ್ದರೂ ಬಸ್ ನಿಲ್ದಾಣದ ಗೋಡೆಗಳಿಗೆ ಮೂತ್ರ ವಿಸರ್ಜನೆ ಮಾಡುವುದು, ಕಸದ ರಾಶಿಯಿಂದ ಇಡೀ ಬಸ್ ನಿಲ್ದಾಣ ತನ್ನ ಸೌಂದರ್ಯ ಕಳೆದುಕೊಂಡು ನಿಂತಿದೆ.
ಇನ್ನು ಬಸ್ ನಿಲ್ದಾಣ ಪಕ್ಕದಲ್ಲಿ ಹೇರ್ ಕಟಿಂಗ್ ಶಾಪ್, ಮೊಬೈಲ್ ಅಂಗಡಿಗಳು ನಡೆಸುವವರು ಬಸ್ ನಿಲ್ದಾಣದ ಒಳಗಡೆ ಕಸ ಎಸೆಯುತ್ತಿದ್ದಾರೆ. ಇದರಿಂದ ಇಲ್ಲಿ ಸಂಪೂರ್ಣ ನೈರ್ಮಲ್ಯ ಹದೆಗೆಟ್ಟಿದ್ದು, ಪ್ರಯಾಣಿಕರು ಬಸ್ ನಿಲ್ದಾಣದ ಹೊರಗಡೆ ನಿಂತು ಬೇರೆ ಊರುಗಳಿಗೆ ತೆರಳುವ ಸಂದರ್ಭ ಬಂದಿದೆ.
ಬಸ್ ನಿಲ್ದಾಣದ ನೈರ್ಮಲ್ಯ ನಿರ್ವಹಣೆಯನ್ನು ಸ್ಥಳೀಯ ನಗರಸಭೆ ಸಹ ನೋಡಿ ಕೊಳ್ಳುತ್ತಿಲ್ಲ. ಇನ್ನು ಸಾರಿಗೆ ಸಂಚಾರ ನಿಯಂತ್ರಕರು ಹಾಗೂ ಸಂಬಂಧಿಸಿದ ಇಲಾಖೆಯೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಪ್ರಯಾಣಿಕರು ಆರೋಪಿಸುತ್ತಾರೆ.