ಹಾವೇರಿ: ಕೆಲವೊಮ್ಮೆ ಸಣ್ಣ-ಪುಟ್ಟ ಟೆನ್ಷನ್ಗಳು ಸಹ ನಮ್ಮ ಕರ್ತವ್ಯ ಮರೆಸಿ ಬಿಡುತ್ತವೆ. ಆದರೆ ಇದಕ್ಕೆಲ್ಲಾ ಅಪವಾದ ಎಂಬಂತೆ ಕೆಲವರು ಎಂಥ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರೂ ತಮ್ಮ ಕರ್ತವ್ಯವನ್ನು ಮರೆಯುವುದಿಲ್ಲ ಎಂಬುದಕ್ಕೆ ನಗರದ ವ್ಯಕ್ತಿಯೊಬ್ಬರು ಸಾಕ್ಷಿಯಾಗಿದ್ದಾರೆ.
ಅಯ್ಯೋ ಇವತ್ತು ಮನೆಗೆ ಪೇಪರ್ ಯಾಕೆ ಬಂದಿಲ್ಲ. ಇಷ್ಟು ಲೇಟ್ ಆಗಿ ಯಾಕೆ ಪೇಪರ್ ಬರೋದು, ಸ್ವಲ್ಪ ಬೇಗ ದಿನಪತ್ರಿಕೆ ಹಾಕಿ.. ಹೀಗೆ ಜನರು ಬೆಳಗ್ಗೆ ನ್ಯೂಸ್ ಪೇಪರ್ ವಿತರಕರು ಹಾಗೂ ಏಜೆಂಟ್ಗಳಿಗೆ ಹತ್ತು ಹಲವು ಪ್ರಶ್ನೆ ಕೇಳ್ತಾರೆ. ಆದರೆ ಕೆಲವೊಬ್ಬರು ಕರ್ತವ್ಯದಲ್ಲಿ ಎಷ್ಟುನಿಷ್ಠೆ ಹೊಂದಿರುತ್ತಾರೆಂದರೆ, ಹಾವೇರಿಯಲ್ಲಿ ಮನೆ ಮನೆಗೆ ಹೋಗಿ ಪೇಪರ್ ಹಾಕುವ ವ್ಯಕ್ತಿವೋರ್ವನ ತಾಯಿ ಮನೆಯಲ್ಲಿ ನಿಧನವಾದರೂ ಆ ನೋವಿನಲ್ಲೇ ಮನೆಗೆ ಪತ್ರಿಕೆ ಹಾಕಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಸಂಜಯ್ ಮಲ್ಲಪ್ಪ ಏಳುಕೋಳದ ಎಂಬುವರು ಸುಮಾರು ವರ್ಷಗಳಿಂದ ಮನೆ ಮನೆಗೆ ದಿನಪತ್ರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇವತ್ತು ಬೆಳ್ಳಂಬೆಳಗ್ಗೆ 4 ಗಂಟೆ ಸುಮಾರಿಗೆ 78 ವರ್ಷದ ತಾಯಿ ಶಾಂತವ್ವ ಏಳುಕೋಳದ ನಿಧನರಾಗಿದ್ದಾರೆ. ತಾಯಿ ನಿಧನರಾದರೂ, ಆ ನೋವಿನಲ್ಲಿಯೇ ಪತ್ರಿಕೆಯ ಓದುಗರಿಗೆ ತೊಂದರೆ ಆಗಬಾರದು ಅಂತಾ ಬೆಳಗ್ಗೆಯಿಂದಲೂ ಬಸವೇಶ್ವರ ನಗರ, ವಿದ್ಯಾನಗರ ಸೇರಿದಂತೆ ನಗರದ ವಿವಿಧೆಡೆ ವಿಜಯ ಕರ್ನಾಟಕ, ಮೂಡಣ, ಲೋಕದರ್ಶನ, ಕನ್ನಡಮ್ಮ ಹೀಗೆ ಹಲವು ಪ್ರಾದೇಶಿಕ ಪತ್ರಿಕೆಗಳನ್ನ ಹಾಕಿ ತನ್ನ ಕರ್ತವ್ಯ ನಿಭಾಯಿಸಿದ್ದಾನೆ ಸಂಜಯ್.
ಪತ್ರಿಕೆಯ ಸಂಪಾದಕರು ಸಹ ನಿಮ್ಮ ತಾಯಿ ನಿಧನ ಹೊಂದಿದ್ದಾರೆ, ಇವತ್ತು ಪತ್ರಿಕೆ ಹಾಕುವುದು ಬೇಡ ಮನೆಗೆ ಹೋಗು, ತಾಯಿ ಅಂತಿಮ ಕಾರ್ಯಕ್ಕೆ ಸಿದ್ಧತೆ ಮಾಡಿಕೊ ಅಂತಾ ಹೇಳಿದ್ದರು. ಆದ್ರೆ ಪತ್ರಿಕೆ ವಿತರಕ ಸಂಜಯ್, ನನ್ನಿಂದ ಓದುಗರಿಗೆ ತೊಂದರೆ ಆಗಬಾರದು. ಎರಡು ಗಂಟೆಗಳ ಕಾಲ ಪತ್ರಿಕೆ ಹಾಕಿ ಮನೆಗೆ ಹೋಗುತ್ತೇನೆ ಅಂತಾ ಹೇಳಿದ್ದಾನೆ. ಅದರಂತೆ ಪೇಪರ್ಗಳನ್ನು ಓದುಗರಿಗೆ ತಲುಪಿಸಿದ್ದಾನೆ. ತಾಯಿ ಅಗಲಿಕೆಯ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದ ಸಂಜಯ್ ಅವರ ವೃತ್ತಿ ನಿಷ್ಠೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗ್ತಿದೆ.