ಹಾವೇರಿ: ಅಣ್ಣನನ್ನು ಪ್ರೀತಿಸಿದ ಹುಡುಗಿ ಕಡೆಯವರ ಕಿರುಕುಳದಿಂದ ಬೇಸತ್ತು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡದ ಯುವಕ ಸುರೇಶ ನಾಯ್ಕ ಸಾವಿಗೀಡಾದ ಯುವಕ ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ: ಸುರೇಶ್ ನಾಯ್ಕ ಸಹೋದರನಾದ ಮಂಜು ನಾಯ್ಕ ಹಾವೇರಿ ಜಿಲ್ಲೆಯ ಯುವತಿಯನ್ನು ಇಷ್ಟಪಟ್ಟು 8 ವರ್ಷದಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆ ಯುವತಿ ಕೂಡ ಮಂಜುನನ್ನು ಪ್ರೀತಿಸುತ್ತಿದ್ದಳಂತೆ. ಯುವತಿಯು, ತನಗೆ ಸರ್ಕಾರಿ ನೌಕರಿ ಸಿಗಲಿದೆ, ಹಣ ಬೇಕು ಎಂದು ತನ್ನ ಪ್ರಿಯಕರ ಮಂಜು ಬಳಿ ಕೇಳಿದ್ದಾಳೆ. ಮಂಜು ಆಕೆಗೆ 4 ಲಕ್ಷ ರೂಪಾಯಿ ಹಣ ಜೊತೆಗೆ ಒಡವೆಗಳನ್ನು ನೀಡಿದ್ದಾನೆ. ಆದರೆ ಯುವತಿ 8 ವರ್ಷದ ಪ್ರೀತಿ ಮರೆತು ಮೇ 30 ರಂದು ಮಂಜುನಾಯ್ಕನನ್ನು ಬಿಟ್ಟು ಬೇರೆ ಯುವಕನೊಂದಿಗೆ ಮದುವೆಯಾಗಿದ್ದಾಳೆ.
ತನಗೆ ಮೋಸ ಮಾಡಿ ಬೇರೆ ಯುವಕನೊಂದಿಗೆ ಮದುವೆಯಾಗುತ್ತಿರುವ ವಿಷಯ ತಿಳಿದ ಮಂಜು ನಾಯ್ಕ್ ಇದರಿಂದ ಕೆರಳಿ, ತನ್ನ ಮತ್ತು ಯುವತಿಯ ಕೆಲವು ಖಾಸಗಿ ವಿಡಿಯೋಗಳನ್ನು ಮೇ 29 ರಂದು ಆಕೆಯ ಸಹೋದರನಿಗೆ ತೋರಿಸಿದ್ದಾನೆ. ಇದನ್ನು ಇಟ್ಟುಕೊಂಡು ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದು ಆಕೆಯ ಕುಟುಂಬಸ್ಥರನ್ನು ಕೆರಳಿಸಿದೆ.
ಆ ಬಳಿಕ ಮಂಜು ನಾಯ್ಕ್ ವಿರುದ್ಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ, ಮೇ 30 ರಂದು ಬೇರೆ ಯುವಕನೊಂದಿಗೆ ಯುವತಿಯ ಮದುವೆ ನಡೆಸಿದ್ದರು. ಇಲ್ಲಿಗೆ ಸುಮ್ಮನಾಗದ ಯುವತಿ ಕುಟುಂಬಸ್ಥರು ಮಂಜುನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಮಂಜು ಬದಲು ಆತನ ತಮ್ಮ ಸುರೇಶ್ ನಾಯ್ಕ್ ಸಿಕ್ಕಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿದೆ.
ಅಲ್ಲದೇ ಆತನ ಕಾರು ಕಸಿದುಕೊಂಡು ಹಿಂಸಿಸಿದ್ದಾರೆ. ಇದರಿಂದ ಬೇಸತ್ತ ಸುರೇಶ್ ಶುಕ್ರವಾರ (ಜೂನ್ 2)ದಂದು ಆತ್ಮಹತ್ಯೆಗೆ ಯತ್ನಿಸಿದ್ದ. ಕುಟುಂಬಸ್ಥರು ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ: ಅಣ್ಣನ ಕಾರಣಕ್ಕಾಗಿ ತಮ್ಮ ಸುರೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ನೋಟ್ ಬರೆದಿಟ್ಟಿದ್ದಾನೆ. ಯುವತಿ ಕಡೆಯವರ ಕಿರುಕುಳದಿಂದಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾನೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಡೆತ್ನೋಟ್ನಲ್ಲಿ ಒತ್ತಾಯಿಸಿದ್ದಾನೆ. ಮಗನ ಸಾವಿಗೆ ಯುವತಿಯ ಮನೆಯವರು ಕಾರಣ ಎಂದು ತಿಳಿದು ಸುರೇಶ್ ನಾಯ್ಕ ಕಡೆಯವರು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇತ್ತ ಯುವತಿ ಮನೆಯವರೂ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ.
ಪೊಲೀಸರು ಎರಡೂ ಕಡೆಯವರ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರೀತಿಸಿದ ನಂತರ ಒಂದಾಗಬೇಕಿದ್ದ, ಜೀವಗಳು ಬೇರೆಯಾಗಿವೆ. ಮತ್ತೊಂದೆಡೆ ರಕ್ತ ಹಂಚಿಕೊಂಡು ಹುಟ್ಟಿದ್ದ ಸಹೋದರ ಬಾರದ ಲೋಕಕ್ಕೆ ತೆರಳಿದ್ದಾನೆ. ಪ್ರಕರಣದ ಸತ್ಯಾಂಶ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ಇದನ್ನೂ ಓದಿ: ಸಬ್ ಇನ್ಸ್ಪೆಕ್ಟರ್ ಪತ್ನಿ ಅನುಮಾನಾಸ್ಪದ ಸಾವು : ಆತ್ಮಹತ್ಯೆ ಶಂಕೆ