ಹಾವೇರಿ: ಕಡಿಮೆ ಹಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯಂತೆ ನಿಮಗೆ ನಿಮಗಿಷ್ಟವಾದ ಮನೆ ಕಟ್ಟಿಸಿಕೊಡುತ್ತೇನೆ ಎಂದು ವ್ಯಕ್ತಿಯೊಬ್ಬ ಹಾನಗಲ್ ತಾಲೂಕಿನ ಯಳವಟ್ಟಿ ಗ್ರಾಮದ 10 ಮಂದಿಗೆ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಯಾರಿಗೂ ಹೇಳಬೇಡಿ ಇದು ಕೇಂದ್ರ ಸರ್ಕಾರದ ಯೋಜನೆ ಮೂರೂವರೆ ಲಕ್ಷ ಹಣ ನೀಡಿದರೆ ನಿಮಗೆ 7 ಲಕ್ಷ ವಾಪಸ್ ಸಿಗುತ್ತದೆ ಎಂದು ಬಣ್ಣದ ಮಾತನ್ನಾಡಿ ಮನೆಗಳಿಗೆ ಅಡಿಪಾಯ ಹಾಕಿ ಹಣದ ಸಮೇತ ನಾಪತ್ತೆಯಾಗಿದ್ದಾನೆ.
ಏನಿದು ಘಟನೆ..?
ಮಂಜಪ್ಪ ಹುಲ್ಮನಿ ಹೆಸರಿನ ವ್ಯಕ್ತಿ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ತಾವರಗೆ ಗ್ರಾಮದ ನಿವಾಸಿ ಎನ್ನಲಾಗಿದ್ದು, ಈತನಿಗೆ ಯಳವಟ್ಟಿ ಗ್ರಾಮದಲ್ಲಿ ಶಂಕರಪ್ಪ ಸುತ್ತಕೋಟಿ ಹೆಸರಿನ ಸಂಬಂಧಿಕರಿದ್ದಾರೆ. ಇವರ ಮನೆಗೆ ಬಂದಿದ್ದ ಮಂಜಪ್ಪ ತಾನು ಕೇವಲ ಮೂರೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಸಿಕೊಡುತ್ತೇನೆ. ಇದನ್ನ ಯಾರಿಗೆ ಹೇಳ್ಬೇಡಿ ಇದು ಕೇಂದ್ರ ಸರ್ಕಾರದ ಯೋಜನೆ ಎಂದಿದ್ದಾನೆ.
ಆತನ ಮಾತು ನಂಬಿದ ಗ್ರಾಮದ 10 ಮಂದಿ ಮೂರುವರೆ ಲಕ್ಷ ರೂಪಾಯಿ ನೀಡಿದ್ದಾರೆ. ಆದರೆ, ಇವರಲ್ಲಿ ಕೆಲವರಿಗೆ ಅರ್ಧ ಮನೆ ಕಟ್ಟಿಸಿಕೊಟ್ಟರೆ ಇನ್ನೂ ಕೆಲವರಿಗೆ ಮನೆಗೆ ಅಡಿಪಾಯ ಸಹ ಹಾಕದೇ ಆತ ಹಣ ಪಡೆದು ಪರಾರಿಯಾಗಿದ್ದಾನೆ.
ಮನೆ ಕಟ್ಟಿದ ಮೇಲೆ ಕೇಂದ್ರ ಸರ್ಕಾರದಿಂದ 7 ಲಕ್ಷ ರೂಪಾಯಿ ನಿಮ್ಮ ಅಕೌಂಟ್ಗೆ ಜಮಾ ಆಗಲಿದೆ. ಆದನ್ನ ನೀವು ನನಗೆ ಕೊಡಬೇಕು ಎಂದು 10ಕ್ಕೂ ಹೆಚ್ಚು ಮಂದಿಯಿಂದ ಹಣ ಪಡೆದಿದ್ದಾನೆ. ಕೆಲವರ ಮನೆಗೆ ಮರಳು, ಇಟ್ಟಗಿ ಇಳಿಸಿ ಕೆಲವರ ಮನೆ ಅರ್ಧ ಕಟ್ಟಿದ್ದರೆ ಇನ್ನೂ ಕೆಲವರ ಮನೆ ಫೌಂಡೇಷನ್ ಮಾಡಿಸಿದ್ದಾನೆ. ಆದರೆ, ಮುಂದಿನ ಕೆಲಸ ಮಾಡದೇ ಪರಾರಿಯಾಗಿದ್ದಾನೆ.
ದೂರು ನೀಡಿದರೂ ಪೊಲೀಸರ ನಿರ್ಲಕ್ಷ್ಯ..?
ಆದರೆ, ಮನೆ ಕೆಲಸ ನಿಂತ ಬಳಿಕ ಸಂಶಯ ಬಂದು ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದು ಬಂದಿದೆ. ಮಂಜಪ್ಪ ನಾಪತ್ತೆಯಾಗುತ್ತಿದ್ದಂತೆ ಮನೆ ಕಟ್ಟಲು ಹಣ ನೀಡಿದ್ದ ಬಡ ಕುಟುಂಬಗಳಿಗೆ ಸಂಶಯ ಬಂದಿದೆ. ಈ ಕುರಿತಂತೆ ಗ್ರಾಮದ ಶಂಕರಪ್ಪ ಮತ್ತು ರಾಮಪ್ಪ ಸುತ್ತಕೋಟಿಗೆ ಆ ವ್ಯಕ್ತಿಯನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ. ಆದರೆ ಆತ ತಮಗೆ ಗೊತ್ತಿಲ್ಲ ಅವನಿಗೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ.
ಇದರಿಂದ ಆತಂಕಗೊಂಡ ಹಣ ಕಳೆದುಕೊಂಡವರು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ವಿಳಂಬ ಮಾಡುತ್ತಿದ್ದಾರೆ ಎಂದು ಮೋಸಗೊಳಕ್ಕಾದವರು ಆರೋಪಿಸಿದ್ದಾರೆ.
ಸಾಲಸೋಲ ಮಾಡಿ, ಒಡವೆ ಮಾರಿ ಮಂಜಪ್ಪಗೆ ತಲಾ ಒಂದೊಂದು ಮನೆಗೆ ಮೂರೂವರೆ ಲಕ್ಷ ರೂಪಾಯಿ ನೀಡಿದ್ದೇವೆ. ನಮಗೆ ಮನೆ ಕಟ್ಟಿಸಿಕೊಡಿ ಇಲ್ಲವೇ ನಮ್ಮ ಹಣ ವಾಪಸ್ ನೀಡಿ ಎನ್ನುತ್ತಿದ್ದಾರೆ.
ಓದಿ: ಅಪರಿಚಿತ ಶವ ಪತ್ತೆ: ಕಾಲುವೆಗೆ ಇಳಿದು ಮೃತ ದೇಹ ಹೊರ ತೆಗೆದ ರಟ್ಟಿಹಳ್ಳಿ ಪಿಎಸ್ಐ