ರಾಣೆಬೆನ್ನೂರು: ನಗರದ ಉಪ ನೋಂದಣಿ ಕಚೇರಿಯಲ್ಲಿ ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ನೋಂದಣಿ ಕಾರ್ಯಾಲಯ ಶಿಸ್ತು ಬದ್ಧ ನಿಯಮಾವಳಿ ರೂಪಿಸಿದೆ.
ನಗರದ ಉಪ ನೋಂದಣಿ ಕಚೇರಿಗೆ ಬರುವರು ಇಸಿ, ಸಿಎ ಬೇಕೆಂದು ನೇರವಾಗಿ ಸಿಬ್ಬಂದಿ ಕೈ ಕುಲುಕುವಂತಿಲ್ಲ. ಕಚೇರಿಯ ಎಲ್ಲಾ ಸೇವೆ ಪಡೆದುಕೊಳ್ಳಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ನಂತರ ಕೆಲಸದ ದಿನ, ಸಮಯ ನಿಗದಿ ಮಾಡಿಕೊಂಡು ಎಂಟ್ರಿ ಪಾಸ್ ತೆಗೆದುಕೊಂಡು ಕಚೇರಿಗೆ ಹೋಗಬೇಕು.
ಇನ್ನು ಕಚೇರಿಗೆ ಬಂದಾಗ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಕ್ರೀನಿಂಗ್ ಮಷಿನ್ ಮೂಲಕ ತಪಾಸಣೆ ಮಾಡಿಸಿಕೊಳ್ಳಬೇಕು. ಮಾಸ್ಕ್ ಧರಿಸದೆ ಬಂದರೆ ಒಳಗಡೆ ಪ್ರವೇಶವಿಲ್ಲ ಎಂದು ಸ್ಪಷ್ಟವಾಗಿ ಸೂಚನಾ ಫಲಕ ಕೂಡ ಅಳವಡಿಸಿದ್ದಾರೆ.
ಕೊರೊನಾ ಸೋಂಕು ಹರಡುವ ಭೀತಿಯಿಂದ ಕಚೇರಿಯ ಕೆಲಸವನ್ನು ಒಂದೂವರೆ ತಿಂಗಳಿಂದ ಸ್ಥಗಿತಗೊಳಿಸಿದ್ದ ಕಚೇರಿಯಲ್ಲಿ ಕಳೆದ ಒಂದು ವಾರದಿಂದ ಮತ್ತೆ ನೋಂದಣಿ ಕೆಲಸಗಳು ಶುರುವಾಗಿವೆ.