ರಾಣೆಬೆನ್ನೂರು(ಹಾವೇರಿ): ರಾಣೆಬೆನ್ನೂರು ತಾಲೂಕಿನ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ನರೇಗಾ ಕಾಮಗಾರಿಗಳನ್ನು ನಡೆಸಲು ಬಹುತೇಕ ಯಂತ್ರಗಳನ್ನು ಬಳಸುತ್ತಿರುವುದು ಕಂಡು ಬಂದಿದೆ.
ರಾಣೆಬೆನ್ನೂರು ವ್ಯಾಪ್ತಿಯ 40 ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ನರೇಗಾ ಕಾಮಗಾರಿಗಳು ನಡೆಯತ್ತಿವೆ. ರಾಜ್ಯ ಸರ್ಕಾರ ಲಾಕ್ಡೌನ್ ನಡುವೆ ಗ್ರಾಮೀಣ ಪ್ರದೇಶದ ಬಡ ಕೂಲಿಕಾರ್ಮಿಕರಿಗೆ ನರೇಗಾ ಕೆಲಸವನ್ನು ಎಲ್ಲರಿಗೂ ನೀಡಬೇಕು ಎಂದು ಆದೇಶ ಹೊರಡಿಸಿದೆ. ಆದರೆ ಕೆಲ ಗ್ರಾಮ ಪಂಚಾಯತ್ಗಳಲ್ಲಿ ಜೆಸಿಬಿ, ಟ್ರ್ಯಾಕ್ಟರ್ ಬಳಸಿಕೊಂಡು ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ರಾಣೆಬೆನ್ನೂರು ತಾಲೂಕಿನ ಆರೇಮಲ್ಲಾಪುರ, ರಾಹುತನಕಟ್ಟಿ, ಹೊನ್ನತ್ತಿ, ಬೇಲೂರು ಗ್ರಾಮ ಪಂಚಾಯತ್ನಲ್ಲಿ ಲಕ್ಷಾಂತರ ರೂ.ಗಳ ನರೇಗಾ ಕಾಮಗಾರಿಗಳನ್ನು ಯಂತ್ರಗಳ ಮೂಲಕ ಮಾಡಲಾಗ್ತಿದ್ದು, ಜನರಿಗೆ ಕೆಲಸಗಳು ಇಲ್ಲದಂತಾಗಿದೆ.
ಮನರೇಗಾ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರ ಬದಲಿಗೆ ಯಂತ್ರೋಪಕರಣ ಬಳಸುತ್ತಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸಹ ಗ್ರಾಮ ಪಂಚಾಯತ್ ಪಿಡಿಒ ಮತ್ತು ಇಒಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಈ ಕಾಮಗಾರಿ ಬಗ್ಗೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ, ಗ್ರಾಮ ಪಂಚಾಯತ್ನಲ್ಲಿ ಮನರೇಗಾ ಕಾಮಗಾರಿಗಳು ಯಂತ್ರಗಳಿಂದ ನಡೆಯುತ್ತಿದೆ ಎಂಬ ಮಾಹಿತಿ ಬಂದಿದೆ. ಇದರ ಬಗ್ಗೆ ತನಿಖೆ ಮಾಡುವಂತೆ ಸಿಇಒ ಅವರಿಗೆ ತಿಳಿಸುತ್ತೇನೆ ಎಂದರು.