ಹಾವೇರಿ: ಜಿಲ್ಲೆಯ ವಿವಿಧೆಡೆ ಸೋಮವಾರ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಕೆಲವೆಡೆ ಧಾರಾಕಾರ ಮಳೆಯಾಗಿದ್ದರೆ ಇನ್ನೂ ಕೆಲವಡೆ ತುಂತುರು ಮಳೆಯಾಗಿದೆ. ಸಂಜೆ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ಬಾಳಂಬೀಡ ಕ್ರಾಸ್‌ನಲ್ಲಿರುವ ತೆಂಗಿನಮರಕ್ಕೆ ಸಿಡಿಲು ಹೊಡೆದಿದೆ. ಸಿಡಿಲು ಬಡಿಯುತ್ತಿದ್ದಂತೆ ತೆಂಗಿನಮರ ಹೊತ್ತಿ ಉರಿದಿದೆ.
ಪಟ್ಟಣದಲ್ಲಿರುವ ತೆಂಗಿನಮರಕ್ಕೆ ಸಿಡಿಲು ಬಡಿದ ಪರಿಣಾಮ ಸ್ಥಳೀಯರು ಆತಂಕಗೊಂಡಿದ್ದರು. ಸ್ವಲ್ಪ ಕಾಲ ಹೊತ್ತಿ ಉರಿದ ಮರದ ಬೆಂಕಿ ಸ್ವಲ್ಪ ಸಮಯದ ನಂತರ ನಂದಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮರದಲ್ಲಿದ್ದ ಬೆಂಕಿಯನ್ನ ನಂದಿಸಿದ್ದಾರೆ.
ನಿಯಂತ್ರಣ ತಪ್ಪಿ ಬೈಕ್ ಸವಾರನ ಸಾವು: ನಿಯಂತ್ರಣ ತಪ್ಪಿ ಬೈಕ್ ಸವಾರನೊಬ್ಬ ಬೈಕ್ ಸಮೇತ ರಸ್ತೆ ಪಕ್ಕದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಲ್ಮಡವು ಗ್ರಾಮದ ಬಳಿ ನಡೆದಿದೆ. ಮೃತನನ್ನು 49 ವರ್ಷ ವಯಸ್ಸಿನ ಭಾಷಾಸಾಬ್ ಜಿಗಳೂರು ಅಂತಾ ಗುರುತಿಸಲಾಗಿದೆ.
ಕಲ್ಮಡುವು ಗ್ರಾಮದ ಸಮೀಪದಲ್ಲಿರುವ ಸಣ್ಣ ಕೆರೆಯ ಬಳಿ ರಸ್ತೆ ತಿರುವು ಇದೆ. ಆದರೆ ರಸ್ತೆ ತಿರುವಿನಲ್ಲಿ ಸೂಕ್ತ ಸೂಚನಾ ಫಲಕಗಳಿಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ ಎನ್ನಲಾಗ್ತಿದೆ. ಸ್ಥಳಕ್ಕೆ ಸಿಪಿಐ ದೇವಾನಂದ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯರ ನೆರವಿನಿಂದ ಮೃತದೇಹವನ್ನು ಕೆರೆಯಿಂದ ಹೊರತೆಗೆಯಲಾಯಿತು. ಮೃತ ಬೈಕ್ ಸವಾರ ಸವಣೂರು ಪಟ್ಟಣದ ಕಡೆಯಿಂದ ಹಾವೇರಿಯತ್ತ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಇದನ್ನೂ ಓದಿ: ಕುಕ್ಕೆ ಸುಬ್ರಮಣ್ಯ ದರ್ಶನಕ್ಕೆ ಹೊರಟಿದ್ದ ಕಾರು ಅಪಘಾತ: ಬಾಲಕಿ ಸೇರಿ ಇಬ್ಬರು ಸಾವು