ಹಾವೇರಿ: ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಮುಂಗಾರು ಪೂರ್ವ ಮಳೆಯಾಗಲೇ ಇಲ್ಲ. ಜೂನ್ ತಿಂಗಳಲ್ಲಿ ಬರಬೇಕಾದ ಮಳೆ ಬಂದಿದ್ದು, ಜುಲೈ ತಿಂಗಳಲ್ಲಿ ಸುರಿದಿತ್ತು. ಇದಕ್ಕಾಗಿ ಕಾದು ಕುಳಿತಿದ್ದ ರೈತರು ಮಳೆಯಾಗುತ್ತಿದ್ದಂತೆ ಜಮೀನುಗಳಲ್ಲಿ ಭರದಿಂದ ಬಿತ್ತನೆ ಕಾರ್ಯ ಮಾಡಿ ಮುಗಿಸಿದ್ದರು. ಆರಂಭದಲ್ಲಿ ಕಡಿಮೆ ಪ್ರಮಾಣದ ಬಿತ್ತನೆಯಾಗಿದ್ದು, ಜಿಲ್ಲೆಯಲ್ಲಿ ಜುಲೈ ತಿಂಗಳ ಅಂತ್ಯದವರೆಗೆ ಪ್ರತಿಶತ 97 ರಷ್ಟು ಬಿತ್ತನೆಯಾಗಿತ್ತು.
ರಾಜ್ಯದಲ್ಲಿ ಅತಿಹೆಚ್ಚು ಬಿತ್ತನೆ ಮಾಡಿದ ಜಿಲ್ಲೆ ಎಂಬ ಹೆಗ್ಗಳಿಕೆ ಸಹ ಹಾವೇರಿಯದ್ದಾಗಿತ್ತು. ಜಿಲ್ಲೆಯ ರೈತರು ಮೆಕ್ಕೆಜೋಳ, ಸೋಯಾಬಿನ್, ಶೇಂಗಾ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದರು. ಬೆಳೆಗಳು ಸಹ ಸಾಕಷ್ಟು ಉತ್ತಮವಾಗಿ ಬೆಳೆದಿದ್ದವು. ಆದರೆ, ಜುಲೈ ತಿಂಗಳಲ್ಲಿ ಸುರಿದಿದ್ದ ಮಳೆರಾಯ ಮತ್ತೆ ಬರಲೇ ಇಲ್ಲ. ಆಗಸ್ಟ್ ತಿಂಗಳು ಮುಗಿದು ಸೆಪ್ಟೆಂಬರ್ ಆರಂಭವಾದರೂ ಮಳೆರಾಯನ ಮುನಿಸು ಶಮನವಾಗಿಲ್ಲ. ಪರಿಣಾಮ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಒಣಗಲಾರಂಭಿಸಿವೆ. ದಿನದಿಂದ ದಿನಕ್ಕೆ ನೆಲದ ಕಡೆ ಬಾಗುತ್ತಿರುವ ಬೆಳೆಗಳನ್ನು ನೋಡುವುದನ್ನೇ ರೈತರು ಬಿಟ್ಟಿದ್ದಾರೆ.
ಒಡನಾಡಿಗಳನ್ನೇ ಮಾರುವ ದುಸ್ಥಿತಿ.. ಇನ್ನೂ ಕೆಲವು ರೈತರು ಬೆಳೆದು ನಿಂತು ಬೆಳೆಗಳು ಮಳೆಯಿಲ್ಲದೇ ಒಣಗಲಾರಂಭಿಸಿದ್ದು, ಅವುಗಳನ್ನು ನೋಡಲಾಗದೆ ನಾಶ ಮಾಡಲಾರಂಭಿಸಿದ್ದಾರೆ. ದನಕರುಗಳನ್ನು ಜಮೀನಿಗೆ ಬಿಟ್ಟು ಇಲ್ಲವೇ ರೋಟರ್ ಮೂಲಕ ಬೆಳೆ ನಾಶ ಮಾಡುತ್ತಿದ್ದಾರೆ. ಈ ಮೂಲಕ ಹಿಂಗಾರು ಬೆಳೆಯನ್ನಾದರು ಉತ್ತಮವಾಗಿ ತಗೆಯುವ ಲೆಕ್ಕಾಚಾರದಲ್ಲಿದ್ದಾರೆ.
ಆದರೆ, ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ರೈತರು ತಮ್ಮ ಒಡನಾಡಿಗಳಾದ ರಾಸುಗಳನ್ನು ಮಾರಲು ಮುಂದಾಗುತ್ತಿದ್ದಾರೆ. ಮನೆಯಲ್ಲಿ ದನಕರುಗಳಿಗೆ ಕುಡಿಸಲು ನೀರಿಲ್ಲ, ಹಾಕಲು ಮೇವಿಲ್ಲ. ಈ ಹಿನ್ನೆಲೆಯಲ್ಲಿ ಹಸು ದನಕರುಗಳನ್ನು ಇಟ್ಟುಕೊಂಡು ಅವುಗಳಿಗೆ ಎಲ್ಲಿಂದ ನೀರು ಮೇವು ತರಬೇಕು ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಪ್ರಮುಖ ಜಾನುವಾರು ಮಾರುಕಟ್ಟೆಗಳಲ್ಲಿ ಒಂದಾಗಿರುವ ಹಾವೇರಿ ಜಾನುವಾರು ಮಾರುಕಟ್ಟೆಯಲ್ಲಿ ಇದೀಗ ಎತ್ತು ಹಸು ಎಮ್ಮೆಗಳನ್ನು ಅತಿಹೆಚ್ಚು ಸಂಖ್ಯೆಯಲ್ಲಿ ಮಾರಾಟಕ್ಕೆ ತರಲಾಗುತ್ತಿದೆ. ಒಂದು ಕಡೆ ಕೈಯಲ್ಲಿ ದುಡ್ಡಿಲ್ಲದೇ ರೈತರು ಜಾನುವಾರು ಮಾರಲು ಬಂದರೆ ಇನ್ನೊಂದು ಕಡೆ ಅವುಗಳನ್ನು ಕೊಳ್ಳಬೇಕಾಗಿದ್ದ ರೈತರ ಕಡೆ ಸಹ ಹಣ ಇಲ್ಲ. ಪರಿಣಾಮ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅಧಿಕ ದನಗಳು ಬಂದಿದ್ದು ಅವುಗಳನ್ನು ಕೊಳ್ಳುವವರೇ ಇಲ್ಲದಂತಾಗಿದೆ.
ಅನ್ನದಾತರ ಬೇಸರ.. ಇದರಿಂದ ಜಾನುವಾರುಗಳ ಬೆಲೆ ಸಹ ಕಡಿತಗೊಂಡಿದ್ದು, ತಮ್ಮ ಪರಿಸ್ಥಿತಿ ಯಾರಿಗೂ ಬೇಡ ಎನ್ನುತ್ತಿದ್ದಾರೆ ರೈತರು. ಕಳೆದ ವರ್ಷ ಅಧಿಕ ಮಳೆಯಾಗಿ ಬೆಳೆ ಹಾಳಾದವು ಈ ವರ್ಷ ಮಳೆಯಿಲ್ಲದೇ ಬೆಳೆಗಳು ಹಾಳಾಗುತ್ತಿವೆ. ಇತ್ತ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ ಮೇವಿಲ್ಲದ ಕಾರಣ ಮಾರುಕಟ್ಟೆಗೆ ಮಾರಾಟಕ್ಕೆ ತಂದರೆ ಖರೀದಿಸುವವರಿಲ್ಲ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ್ದ ಎತ್ತುಗಳನ್ನು ಮಾರಾಟಕ್ಕೆ ತಂದರೆ ಖರೀದಿದಾರರು ಕೇವಲ ಇಪ್ಪತ್ತು ಮೂವತ್ತು ಸಾವಿರಕ್ಕೆ ಕೇಳುತ್ತಿದ್ದಾರೆ ಎನ್ನುತ್ತಾರೆ ರೈತರು. ಸಿಎಂ ಸಿದ್ದರಾಮಯ್ಯ ಸರ್ಕಾರ ಮಹಿಳೆಯರಿಗಾಗಿ, ನಿರುದ್ಯೋಗಿಗಳಿಗೆ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಆದರೆ, ವಿಶ್ವಕ್ಕೆ ಅನ್ನ ನೀಡುವ ರೈತನ ಕಡೆಗೂ ಗಮನ ಹರಿಸಬೇಕು. ರೈತರಿಗೆ ಯಾವುದಾದರೂ ಯೋಜನೆ ತಂದು ರಕ್ಷಣೆಗೆ ಮುಂದಾಗಬೇಕು. ಬರಗಾಲ ಆವರಿಸಲಾರಂಭಿಸಿದ್ದು ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ರೈತರು ಒತ್ತಾಯಿಸಿದ್ದಾರೆ.