ಹಾವೇರಿ: ಪರ್ಸೆಂಟೇಜ್ ವಿಚಾರ ಕುರಿತಂತೆ ಗುತ್ತಿಗೆದಾರರು ದೇಶದ ಪ್ರಧಾನಿಗೆ ಪತ್ರ ಬರೆದಿರುವುದು ದೇಶದ ಇತಿಹಾಸದಲ್ಲಿಯೇ ಪ್ರಥಮ ಬಾರಿ ಇರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯದ ಗುತ್ತಿಗೆದಾರರು ಪತ್ರ ಬರೆದಂತೆ ಬಹುಶಃ ಯಾರೂ ಪತ್ರ ಬರೆದಿರಲಿಕ್ಕಿಲ್ಲ. ಇದೊಂದು ದುರ್ದೈವದ ಸಂಗತಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಕೂಡಲೇ ಕೇಂದ್ರ ತನಿಖಾ ದಳದಿಂದ ತನಿಖೆ ಕೈಗೊಳ್ಳುವಂತೆ ಸಲೀಂ ಅಹ್ಮದ್ ಒತ್ತಾಯಿಸಿದರು.
ನಿಷ್ಪಕ್ಷಪಾತ ತನಿಖೆ ನಡೆಸಿ:
ಬಿಟ್ ಕಾಯಿನ್ ವಿಚಾರದಲ್ಲಿ ಸರ್ಕಾರದವರು ಕತ್ತಲಲ್ಲಿ ಗುಂಡು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಅಧಿಕಾರದಲ್ಲಿದ್ದಾಗ, ಇವರು ಅಧಿಕಾರದಲ್ಲಿದ್ದಾಗ ಎಂದು ಸಬೂಬು ಹೇಳುವುದನ್ನು ಬಿಡಬೇಕು. ಬದಲಿಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದೆ:
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತಂತೆ ಪ್ರತಿಕ್ರಿಯಿಸಿ, ಜೆಡಿಎಸ್‌ನವರು ಯಾವ ಹೊತ್ತಿನಲ್ಲಿ ಏನು ಮಾಡುತ್ತಾರೆ ಗೊತ್ತಾಗುತ್ತಿಲ್ಲ. ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದೆ ಎಂದರು.
ಇನ್ನು ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಮೇಲಿನ ದಾಳಿಗೆ ಪ್ರತಿಕ್ರಿಯಿಸಿದ ಅವರು ರಾಜ್ಯ ಸರ್ಕಾರದ ಭ್ರಷ್ಟಾಚಾರ ಕರ್ಮಕಾಂಡಗಳ ಬೆತ್ತಲೆಗೊಳಿಸುವ ಕಾರ್ಯವನ್ನ ಕಾಂಗ್ರೆಸ್ ಮಾಡಲಿದೆ. ಭ್ರಷ್ಟಾಚಾರಕ್ಕೆ ಯಾವುದೇ ಪಕ್ಷವಿಲ್ಲ. ಭ್ರಷ್ಟಅಧಿಕಾರಿಗಳ ಮೇಲೆ ದಾಳಿ ಮಾಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಬಿಜೆಪಿ ನಾಯಕರ ಕೇರಳ ಮಾದರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಪಡಿಸುವ ಕುರಿತಂತೆ ಮಾತನಾಡಿದ ಅವರು, 2023 ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಗ್ರಾಮ ಪಂಚಾಯತ್ ಸಮಗ್ರ ಅಭಿವೃದ್ಧಿಯನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ ಎಂದರು.
ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು:
ಅಕಾಲಿಕ ಮಳೆಯಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯವನ್ನು ಜನರ ಮುಂದೆ ತೆರದಿಡಲಿದೆ ಎಂದು ಸಲೀಂ ಅಹ್ಮದ್ ತಿಳಿಸಿದರು.
ಇದನ್ನೂ ಓದಿ: ಅಕಾಲಿಕ ಮಳೆಗೆ ಭತ್ತದ ಬೆಳೆ ಹಾನಿ: ಸೂಕ್ತ ಪರಿಹಾರಕ್ಕೆ ರೈತರು ಮನವಿ