ಹಾವೇರಿ: ಡಿ.24ರಂದು ನಗರದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶರಣಬಸವ ಅಂಗಡಿ ಲಾ ಫರ್ಮ್ ಅಧ್ಯಕ್ಷ ಶರಣಬಸಪ್ಪ ಅಂಗಡಿ ತಿಳಿಸಿದ್ದಾರೆ. ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಸಂಸ್ಥೆಯಿಂದ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8.30ರಿಂದ ಸಂಜೆ 4.30ರವರೆಗೆ ಮೇಳ ನಡೆಯಲಿದೆ ಎಂದು ತಿಳಿಸಿದರು.
ಗದಗ ಜಿಲ್ಲೆಯಲ್ಲಿ ಈಗಾಗಲೇ ಹಲವು ಬಾರಿ ಉದ್ಯೋಗ ಮೇಳ ಹಮ್ಮಿಕೊಂಡಿರುವ ಅನುಭವ ಲಾ ಫರ್ಮ್‌ಗಿದೆ. ಹಾವೇರಿ ವಾಣಿಜ್ಯೋದ್ಯಮ ಸಂಸ್ಥೆಯ ಸಹಯೋಗದಲ್ಲಿ ನಗರದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಮೇಳ ನಡೆಯಲಿದೆ. ಜಿಲ್ಲೆಯ ವಿವಿಧ ಸಂಘಟನೆಗಳು ಮೇಳಕ್ಕೆ ಸಹಕಾರ ನೀಡಿವೆ ಎಂದರು.
ಹಾವೇರಿ ಕೃಷಿ ಆಧಾರಿತ ಜಿಲ್ಲೆಯಾಗಿದೆ. ಕೌಶಲ್ಯಯುತ ಕೂಲಿಕಾರ್ಮಿಕರನ್ನು ಹೊಂದಿರುವ ಜಿಲ್ಲೆಯೂ ಹೌದು. ಈ ಹಿನ್ನೆಲೆಯಲ್ಲಿ ಕೃಷಿ ಆಧಾರಿತ ಮತ್ತು ಬಡ ಕೂಲಿ ಕಾರ್ಮಿಕರಿಗೆ ನೆರವಾಗುವ ಉದ್ಯೋಗಗಳಿಗೆ ಇಲ್ಲಿ ಅವಕಾಶ ನೀಡಲಾಗಿದೆ. ಮೇಳದಲ್ಲಿ 5ನೇ ತರಗತಿಯಿಂದ ಹಿಡಿದು ಪದವಿವರೆಗೆ ವ್ಯಾಸಂಗ ಮಾಡಿರುವ ಉದ್ಯೋಗಾಂಕ್ಷಿಗಳು ಭಾಗವಹಿಸಬಹುದು. ರಾಜ್ಯದ ಪ್ರತಿಷ್ಠಿತ ವಿವಿಧ ಕಂಪನಿಗಳು ಭಾಗವಹಿಸಲಿವೆ ಎಂದು ಅವರು ಮಾಹಿತಿ ನೀಡಿದರು.
ಪ್ರತಿಷ್ಠಿತ ವಿವಿಧ ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿದ್ದು ಸುಮಾರು ಐದು ಸಾವಿರ ಉದ್ಯೋಗಾಂಕ್ಷಿಗಳು ಬೇಕಾಗಿದ್ದಾರೆ. ಕೇವಲ ಉದ್ಯೋಗ ಮೇಳ ಆಯೋಜನೆ ಅಷ್ಟೇ ಅಲ್ಲದೇ ನಿರುದ್ಯೋಗಿಗಳಿಗೆ ವಿವಿಧ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುವುದು. ಕನಿಷ್ಠ ಮೂರು ತಿಂಗಳಿಗೊಮ್ಮೆ ಈ ರೀತಿಯ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಶರಣಬಸವ ಅಂಗಡಿ ತಿಳಿಸಿದರು.
24ರಂದು ನಡೆಯುವ ಉದ್ಯೋಗ ಮೇಳವನ್ನು ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ಉದ್ಘಾಟಿಸುವರು. ಜಿಲ್ಲೆಯ ಉದ್ಯೋಗ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.
ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಪುದುಚೇರಿ ಮತ್ತು ಲಕ್ಷದ್ವೀಪದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 27ರಿಂದ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆ ಮತ್ತು ಅರ್ಜಿ ಶುಲ್ಕ ಪಾವತಿಗೆ ಕಡೆಯ ದಿನಾಂಕ ಜನವರಿ 26. ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ aai.aero ಇಲ್ಲಿಗೆ ಭೇಟಿ ನೀಡಿ.
ಇದನ್ನೂಓದಿ: ಒಂದೇ ವರ್ಷದಲ್ಲಿ ಮಲೆ ಮಾದಪ್ಪನ ಬೆಟ್ಟಕ್ಕೆ 50 ಲಕ್ಷ ಭಕ್ತರ ಆಗಮನ: 63 ಕೋಟಿ ರೂ. ಆದಾಯ ಸಂಗ್ರಹ