ಹಾವೇರಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಮಾವೇಶ ಹಾನಗಲ್ನಲ್ಲಿ ಸೋಮವಾರ ಅದ್ಧೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಹಳೆ ಘಟನೆಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಜನಾರ್ದನ ರೆಡ್ಡಿ ನೆನೆದರು. 2008ರಲ್ಲಿ ನಾನು ಮಾಡಿದ ಅಭಿವೃದ್ದಿ ಯೋಜನೆಗಳನ್ನೊಮ್ಮೆ ನೋಡಿ. 12 ವರ್ಷಗಳಲ್ಲಿ ಜನಾರ್ದನ ರೆಡ್ಡಿ ಈ ರೀತಿ ಮಾಡಿದರೆ ಮುಂದೆ ಇನ್ನೆಷ್ಟು ಅಭಿವೃದ್ಧಿ ಮಾಡಬಹುದು ಎಂದು ಊಹಿಸಿಕೊಳ್ಳಿ ಎಂದರು.
"ನನ್ನನ್ನು ವೈರಿಯಂತೆ 12 ವರ್ಷದಿಂದ ಸಾರ್ವಜನಿಕ ಬದುಕಿನಿಂದ ದೂರವಿಟ್ಟರು. ಬಳ್ಳಾರಿಗೆ ಬರುವುದನ್ನೂ ತಡೆದರು. ಬೆಳ್ಳಗಿರುವುದೆಲ್ಲ ಹಾಲು ಎಂದು ತಿಳಿದಿದ್ದ ನಾನು ಬಲೆಗೆ ಬಿದ್ದೆ. ಯಾವ ರೀತಿ ಮೀನು ಹಿಡಿಯಲು ಬಲಿ ಹಾಕುತ್ತಾರೋ ಅದೇ ರೀತಿ ನನ್ನನ್ನು ಬಲೆಗೆ ಬೀಳಿಸಿದರು. ಆದರೆ ನನಗೆ ಬಲೆ ಹಾಕಿರುವುದು ಗೊತ್ತಿರಲಿಲ್ಲ" ಎಂದರು.
"ರಾಜಕೀಯ ಎಂದರೆ ಮೋಸ, ತಂತ್ರ, ಕುತಂತ್ರ, ದ್ವೇಷ, ಸುಳ್ಳು, ಒಬ್ಬರ ಬೆನ್ನ ಮೇಲೆ ಕಾಲಿಟ್ಟು ಮತ್ತೊಬ್ಬರ ತಲೆಮೇಲೆ ಕಾಲಿಟ್ಟು ಮೇಲೆ ಬರುವುದು ಎಂದು ಅನುಭವಸ್ಥರು ಹೇಳಿದ್ದರು. ಆದರೆ ಭಗವಂತ ತುಂಬ ದೊಡ್ಡವನು. ಮನುಷ್ಯ ಎಷ್ಟೇ ಬೀಳಲು ಯತ್ನಿಸಿದರೂ ದೇವರು ಬೀಳಿಸುವವರೆಗೆ ಬೀಳುವುದಿಲ್ಲ. ನನಗೆ ತೊಂದರೆ ನೀಡಿದವರೆಲ್ಲ ಇವತ್ತು 20 ರಿಂದ ಮೂವತ್ತು ಮಾತ್ರೆ ತೆಗೆದುಕೊಂಡು ಮಲಗುತ್ತಿದ್ದಾರೆ. ಆದರೆ ಒಂದೇ ಒಂದು ಮಾತ್ರೆ ತಗೆದುಕೊಳ್ಳದೇ ನಾನು ಮಲಗುತ್ತಿದ್ದೇನೆ" ಎಂದು ಹೇಳಿದರು.
"ರಾಜಕೀಯ ಕುತಂತ್ರದಿಂದ ಬೇಸತ್ತು ರಾಜಕೀಯದಿಂದ ನಾನು ಬಹಳ ದೂರ ಇದ್ದೆ. ನನ್ನ ಹೆಂಡತಿ ಮಕ್ಕಳ ಜೊತೆ ಆರಾಮಾಗಿದ್ದೆ. ಆದರೆ ನಾನು ಬಳ್ಳಾರಿಯಲ್ಲಿದ್ದರೆ ಅವರಿಗೆ ತೊಂದರೆಯಾಗುತ್ತದೆ ಎಂದು ನನ್ನನ್ನು ಬಳ್ಳಾರಿಯಿಂದ ದೂರ ಮಾಡಿದರು. ಇದರಿಂದ ಬೇಸತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದೇನೆ" ಎಂದು ತಿಳಿಸಿದರು.
"ಅಭಿವೃದ್ದಿ ಎಂದರೆ ಕೇವಲ ಬೆಂಗಳೂರು ನಗರದ ಸುತ್ತಮುತ್ತ, ಕರಾವಳಿ ತೀರ ಪ್ರದೇಶ ಮತ್ತು ಮಲೆನಾಡು ಅಭಿವೃದ್ದಿಯಂತಾಗಿದೆ. ಇದನ್ನು ಬದಲಾಯಿಸಿ ಅಭಿವೃದ್ಧಿಯೆಂದರೆ ಉತ್ತರ ಕರ್ನಾಟಕದ 13 ಜಿಲ್ಲೆಗಳೂ ಸೇರಿ ಸಮಗ್ರ ಕರ್ನಾಟಕದ ಅಭಿವೃದ್ಧಿಯಾಗಬೇಕು ಎನ್ನುವ ಸಂಕಲ್ಪದಿಂದ ನಾನು ಪಕ್ಷ ಸ್ಥಾಪಿಸಿದ್ದೇನೆ. ನಾನು ಪಕ್ಷ ಸ್ಥಾಪಿಸಿದಾಗ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಸಫಲವಾಗಿಲ್ಲ ಎಂದು ಅನೇಕರು ಪ್ರಶ್ನಿಸಿದರು."
"ಈ ಹಿಂದೆ ಜಯಪ್ರಕಾಶ್ ನಾರಾಯಣ ಅವರು ಕಂಡ ಯಶಸ್ಸಿನಂತೆ ನಾನೂ ಯಶಸ್ವಿಯಾಗುತ್ತೇನೆ ಎಂಬ ವಿಶ್ವಾಸವಿದೆ. 31 ಕ್ಷೇತ್ರಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದರು. ಇದೇ ವೇಳೆ ಪರೋಕ್ಷವಾಗಿ ಜೆಡಿಎಸ್ ಬಗ್ಗೆ ಮಾತನಾಡಿದ ರೆಡ್ಡಿ, ದಕ್ಷಿಣ ಭಾರತದಲ್ಲಿ ಆ ಪಕ್ಷದ ನಾಯಕರು ಇಪ್ಪತ್ತು ಮೂವತ್ತು ಸ್ಥಾನ ಗೆದ್ದು ಕರ್ನಾಟಕವನ್ನು ಆಟ ಆಡಿಸುತ್ತಿದ್ದರು. ನಾವು ಉತ್ತರ ಕರ್ನಾಟಕದಿಂದ ಗೆದ್ದು ಕರ್ನಾಟದ ಅಭಿವೃದ್ಧಿ ಮಾಡುತ್ತೇವೆ" ಎಂದು ಹೇಳಿದರು.
ಭರವಸೆ: ಕೆಆರ್ಪಿಪಿ ಅಧಿಕಾರಕ್ಕೆ ಬಂದರೆ ಬಿಪಿಎಲ್ ಕುಟುಂಬಗಳಿಗೆ ಪ್ರತಿ ವರ್ಷ 15 ಸಾವಿರ ರೂಪಾಯಿ, ರೈತರ ಮನೆ ಬಾಗಿಲಿಗೆ ಗೊಬ್ಬರ, ಬಿತ್ತನೆ ಬೀಜ, ರೈತರಿಗೆ ದಿನಕ್ಕೆ 9 ಗಂಟೆ ತ್ರಿಫೇಸ್ ಉಚಿತ ವಿದ್ಯುತ್ ಪೂರೈಕೆ ಮತ್ತು ಪ್ರತಿಯೊಂದು ಹೋಬಳಿ ಕೇಂದ್ರದಲ್ಲಿ ಮಲ್ಟಿ ಸ್ಫೆಷಾಲಿಟಿ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರುವುದಾಗಿ ಜನಾರ್ದನ ರೆಡ್ಡಿ ತಿಳಿಸಿದರು.
ಇದನ್ನೂ ಓದಿ :ನಾನು ಕಿಂಗೋ, ಕಿಂಗ್ ಮೇಕರೋ ಸ್ವಲ್ಪ ಕಾದು ನೋಡಿ : ಜನಾರ್ದನ ರೆಡ್ಡಿ