ಹಾವೇರಿ: ರಾಣೆಬೆನ್ನೂರು ತಾಲೂಕಿನ ಚಿಕ್ಕಬಿದರಿ ಗ್ರಾಮದ ಯುವತಿ ಮತ್ತು ಹರಪನಹಳ್ಳಿಯ ಯುವಕ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರಿಗೆ ಈಗ ಭಾರಿ ಸಂಕಷ್ಟ ಎದುರಾಗಿದೆ. ಚೈತ್ರಾಗೆ 19 ವರ್ಷವಾಗಿದ್ದರೆ ರಮೇಶನಿಗೆ 20 ವರ್ಷ. ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೋಂದಣಿ ಮಾಡಲು ಹೋಗಿದ್ದ ವೇಳೆ ರಮೇಶನ ವಯಸ್ಸನ್ನು ಕೇಳಿ ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ.
ಕಾನೂನು ಪ್ರಕಾರ ಯುವಕನಿಗೆ 21 ವರ್ಷ ವಯಸ್ಸಾಗಿರಬೇಕು. ನೋಂದಣಿ ಕಚೇರಿಯಲ್ಲಿ ಮದುವೆ ಆಗದ ಹಿನ್ನೆಲೆ ರಮೇಶ ಮತ್ತು ಚೈತ್ರಾ ಕುಮಾರಪಟ್ಟಣಂನ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
ಅಂತರ್ಜಾತಿ ವಿವಾಹ: ಚೈತ್ರಾ ಲಿಂಗಾಯತ ಸಮುದಾಯದವರಾಗಿದ್ದರೆ ರಮೇಶ ಕುರುಬ ಸಮುದಾಯಕ್ಕೆ ಸೇರಿದ್ದಾನೆ. ಇದರಿಂದ ಚೈತ್ರಾ ಮನೆಯಲ್ಲಿ ರಮೇಶ ಮತ್ತು ಚೈತ್ರಾ ಮದುವೆಗೆ ಒಪ್ಪಿಗೆ ಇಲ್ಲ. ರಮೇಶನ ತಂದೆ ತಾಯಿಗೆ ಚೈತ್ರಾ ಪೋಷಕರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಜೀವ ಬೆದರಿಕೆ: ರಮೇಶನನ್ನು ಇಲ್ಲಿಗೆ ಕರೆಯಿಸಿ, ಇಲ್ಲದಿದ್ದರೇ ನಾವೇ ನಿಮ್ಮ ಮಗನನ್ನು ಹುಡುಕಿ ಕೊಲ್ಲುತ್ತೇವೆ ಎಂದು ಚೈತ್ರಾ ಪೋಷಕರು ಬೆದರಿಕೆ ಹಾಕುತ್ತಿದ್ದಾರಂತೆ.ಅಲ್ಲದೇ ಚೈತ್ರಾ ಪೋಷಕರು ಗುಂಡಾಗಳ ಜೊತೆ ಎರಡು ಬಾರಿ ನನ್ನ ಮೇಲೆ ದಾಳಿ ಮಾಡಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾನೆ.
ಆಸ್ತಿಗಾಗಿ ಹತ್ಯೆ ಮಾಡಲು ಸಂಚು: ಚೈತ್ರಾ ಹೆಸರಲ್ಲಿ ಕೋಟಿ ರೂಪಾಯಿ ಅಸ್ತಿ ಇದೆಯಂತೆ. ಆಸ್ತಿ ತಮ್ಮ ಹೆಸರಿಗೆ ಬರೆದುಕೊಡುವಂತೆ ಪೋಷಕರು ಒತ್ತಾಯಿಸಿದ್ದಾರೆ. ಈ ಸಂಬಂಧ ನನ್ನನ್ನ ಎರಡು ಬಾರಿ ಕೊಲೆ ಮಾಡಲು ಪೋಷಕರು ನೋಡಿದ್ದಾರೆ ಎಂದು ಚೈತ್ರಾ ಆರೋಪಿಸಿದ್ದಾರೆ.
ತಮಗೆ ಸಾಕಷ್ಟು ಭಯವಾಗುತ್ತಿದೆ. ಹಾವೇರಿ ಪೊಲೀಸ್ ವರಿಷ್ಠರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಲು ಬಂದಿದ್ದೇವೆ. ಈಗಲಾದರೂ ಚೈತ್ರಾ ಪೋಷಕರು ನಮ್ಮ ಪಾಡಿಗೆ ನಮ್ಮನ್ನ ಬಿಡಲಿ. ನನಗೆ ವಯಸ್ಸಾಗುತ್ತಿದ್ದಂತೆ ಚೈತ್ರಾಳನ್ನ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆ ಮಾಡಿಕೊಳ್ಳುತ್ತೇನೆ. ಅಲ್ಲಿಯವರಿಗೆ ಚೈತ್ರಾಳನ್ನ ಸಾಂತ್ವನ ಕೇಂದ್ರದಲ್ಲಿಡಲಿ ಎನ್ನುತ್ತಿದ್ದಾನೆ ರಮೇಶ್.
ಇದನ್ನೂ ಓದಿ: ಈಜಲು ಬಾವಿಗೆ ಇಳಿದ ಇಬ್ಬರು ಮಕ್ಕಳು ನೀರುಪಾಲು.. ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ