ರಾಣೆಬೆನ್ನೂರು : ದಾವಣಗೆರೆಯಲ್ಲಿ ಕೊರೊನಾ ಹಾವಳಿ ಹೆಚ್ಚಿದ ಹಿನ್ನೆಲೆ ಗಡಿ ಭಾಗ ರಾಣೆಬೆನ್ನೂರು ತಾಲೂಕಿನ ಜನರಲ್ಲೂ ಆತಂಕ ಮನೆಮಾಡಿದೆ.
ರಾಣೆಬೆನ್ನೂರು ನಗರಕ್ಕೆ ಗಡಿ ಭಾಗವಾಗಿ ಹಂಚಿಕೊಂಡಿರುವ ದಾವಣಗೆರೆ ಜಿಲ್ಲೆಯಲ್ಲಿ ಈಗಾಗಲೇ 10 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದ ಗ್ರಾಮಗಳ ಜನರಿಗೆ ಕೊರೊನಾ ಆತಂಕ ಹೆಚ್ಚಾಗಿದೆ. ಇತ್ತ ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗದ ಹಿನ್ನೆಲೆ ಜಿಲ್ಲಾಡಳಿತ ಹಸಿರು ವಲಯವೆಂದು ಗುರುತಿಸಿ, ರಾಣೆಬೆನ್ನೂರ ನಗರದಲ್ಲಿ ವ್ಯಾಪಾರ, ವಹಿವಾಟಿಗೆ ಸಮ್ಮತಿ ನೀಡಿದೆ.
ಇದರಿಂದ ನಗರದಲ್ಲಿ ಈಗಾಗಲೇ ಜನ ಸೇರುವ ಬಟ್ಟೆ, ಬಂಗಾರ, ಕಿರಾಣಿ ಅಂಗಡಿಗಳನ್ನು ಸಹ ತೆರೆಯಲಾಗಿದ್ದು, ವ್ಯಾಪರ ಜೋರಾಗಿ ನಡೆಯುತ್ತಿದೆ. ಅಲ್ಲದೇ ಪಕ್ಕದ ದಾವಣಗೆರೆ ನಗರದಿಂದ ಬಟ್ಟೆ ವ್ಯಾಪಾರ ಮಾಡಲು ನಗರಕ್ಕೆ ಆಗಮಿಸುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇದರಿಂದ ದೊಡ್ಡಪೇಟೆ ಸ್ಥಳೀಯರು ಮುಂಜಾಗೃತೆಯಿಂದಾಗಿ ರಸ್ತೆಗೆ ಬ್ಯಾರಿಕೇಡ್ ಹಾಕಿ ಯಾರಿಗೂ ಪ್ರವೇಶ ನೀಡುತ್ತಿಲ್ಲ.
ಸದ್ಯ ಜಿಲ್ಲಾಡಳಿತ ಅಂತರ ಜಿಲ್ಲೆಯ ಪ್ರವೇಶ ನಿರ್ಬಂಧಿಸಿದೆ. ಆದರೂ ವ್ಯಾಪಾರ ಮಾಡುವ ಸಲುವಾಗಿ ನೆರೆಯ ದಾವಣಗೆರೆ ಜನ ರಾಣೆಬೆನ್ನೂರ ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ಜನ ಆರೋಪಿಸುತ್ತಿದ್ದಾರೆ.