ಹಾವೇರಿ: ರೈತ ಸ್ನೇಹಿಯಾಗಿರುವ ಸಸ್ತನಿ ಕುಟುಂಬಕ್ಕೆ ಸೇರಿದ ನಿರುಪದ್ರವಿ ಜೀವಿಯಾಗಿರುವ ಬಾವಲಿಗಳು ಬೇಟೆಗಾರರ ದಾಳಿಗೆ ತುತ್ತಾಗಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರು ಬಳಿ ಬೆಳಕಿಗೆ ಬಂದಿದೆ. ಮರಕ್ಕೆ ನೇತಾಡುತ್ತಿದ್ದ 85 ಬಾವಲಿ ಸಸ್ತನಿಗಳನ್ನು ಬೇಟೆಯಾಡಿದ್ದಾರೆ.
ಮಾಸೂರು ಶಾಖೆ ಮಾಸೂರು ಗಸ್ತು ವ್ಯಾಪ್ತಿಯಲ್ಲಿ ಕುಮದ್ವತಿ ನದಿಯ ದಡದ ಮೇಲೆ ನೀಲಗಿರಿ ಮರಗಳ ಮೇಲೆ ವಾಸವಿದ್ದ ಬಾವಲಿ ಸಸ್ತನಿಗಳನ್ನು ಅಕ್ರಮವಾಗಿ ಆ.13ರಂದು(ನಿನ್ನೆ) ಬೆಳಗಿನ ಜಾವ ಬೇಟೆಯಾಡಿ 85 ಬಾವಲಿಗಳನ್ನು ಹತ್ಯೆಗೈದಿರುವ ಪ್ರಕರಣವನ್ನು ಮಾಸೂರು ಅರಣ್ಯ ರಕ್ಷಕ ಚಮನಲಿ ಕಾಲೇಕಾನವರ ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ.. ಮಂಗಳೂರು ಕೋರ್ಟ್ನಿಂದ ಆರೋಪಿಗೆ ಆರು ಕೋಟಿ ರೂ. ದಂಡ!
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 9 ಮತ್ತು 51 ರಡಿ ದೂರು ದಾಖಲಿಸಲಾಗಿದೆ. ಆರೋಪಿಗರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಹಿರೇಕೆರೂರು ವಲಯ ಅರಣ್ಯಾಧಿಕಾರಿಗಳು ಸದರಿ ಆರೋಪಿತರಿಗೆ ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ನ್ಯಾಯಾಲಯದ ವಶಕ್ಕೆ ಆರೋಪಿಗಳನ್ನು ಒಪ್ಪಿಸಿರುವುದಾಗಿ ತಿಳಿದು ಬಂದಿದೆ.