ಹಾವೇರಿ: ಜಿಲ್ಲೆಯಲ್ಲಿ ಬೆಳೆ ಪರಿಹಾರ ವಿತರಣೆಯಲ್ಲಿ ಭಾರಿ ಗೋಲ್ಮಾಲ್ ಆಗಿದೆ ಎನ್ನುವುದು ಸದ್ಯ ಕೇಳಿಬರುತ್ತಿರುವ ಪ್ರಮುಖ ಆರೋಪ. ಇದೀಗ ತಮಗೆ ಬಿಡುಗಡೆಯಾಗಬೇಕಿದ್ದ ಬೆಳೆ ಪರಿಹಾರದ ಹಣ ಬೇರೆಯವರ ಖಾತೆಗೆ ವರ್ಗಾವಣೆಯಾಗಿದೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸ್ವಂತ ಊರಾದ ದೇವಗಿರಿಯಲ್ಲಿ ನನ್ನ ಹೆಸರಿನಲ್ಲಿ ಜಮೀನಿದೆ. ಬೆಳೆ ಪರಿಹಾರ ವಿತರಣೆಯಲ್ಲಿ ನನ್ನ ಹೆಸರಿಗೆ 78 ಸಾವಿರ ರೂ. ಹಣ ಬಿಡುಗಡೆಯಾಗಿದೆ. ಆದರೆ, ನಮ್ಮ ಊರಿನಲ್ಲೇ ಇರದ ಹಾಗೂ ನಮಗೆ ತಿಳಿಯದ ವ್ಯಕ್ತಿಗಳ ಹೆಸರಿನಲ್ಲಿ ಹಣ ಬಿಡುಗಡೆಯಾಗಿದೆ ಎಂದು ಆರೋಪಿಸಿದರು.
ಅಷ್ಟೇ ಅಲ್ಲದೆ ಹಣ ಬಿಡುಗಡೆಯಾಗಿರುವ ಶಿವಾನಂದ ಗಾಣಿಗೇರ, ಮಹಾದೇವಕ್ಕ ಗಾಣಿಗೇರ್, ಮತ್ತು ಗದಿಗೆವ್ವ ತಳವಾರ ಎನ್ನುವ ಹೆಸರಿನವರು ಯಾರು ಅಂತಾ ಸಹ ಗೊತ್ತಾಗಿಲ್ಲ ಎಂದು ಸಜ್ಜನರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬೆಳೆ ಪರಿಹಾರ ವಿತರಣೆಯಲ್ಲಿ ಗೋಲ್ಮಾಲ್ ಆಗಿದ್ದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾ ಎಂದು ಸಜ್ಜನರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೂಸರ್ ನೇಮ್ ಮತ್ತು ಪಾಸ್ವರ್ಡ್ ಬೇರೆಯವರ ಕೈಯಲ್ಲಿ ಸಿಕ್ಕಿರುವುದರಿಂದ ಈ ರೀತಿಯಾಗಿ ದುರ್ಬಳಕೆಯಾಗಿರಬಹುದು. ಈ ಕುರಿತಂತೆ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸುವುದಾಗಿ ಸಜ್ಜನರ್ ತಿಳಿಸಿದ್ದಾರೆ.