ಹಾವೇರಿ: ಕಾರ್ತಿಕೋತ್ಸವ ಅಂಗವಾಗಿ ಇಲ್ಲಿಯ ಕಬ್ಬೂರು ಗ್ರಾಮದಲ್ಲಿ ಬುಧವಾರ ದನಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಗೆ ಹಾವೇರಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಐದು ನೂರಕ್ಕೂ ಅಧಿಕ ಹೋರಿಗಳನ್ನ ಕರೆತರಲಾಗಿತ್ತು. ಇದರಲ್ಲಿ ಭಾಗಿಯಾದ ಹೋರಿಗಳಿಗೆ ಬಲೂನ್, ಘಂಟೆ, ಕೊಬ್ಬರಿಗಳಿಂದ ಸಿಂಗರಿಸಲಾಗಿತ್ತು.
ಸ್ಪರ್ಧೆ ಆರಂಭಕ್ಕೂ ಮುನ್ನಾ ಹೋರಿಗಳನ್ನು ಸರತಿಯಲ್ಲಿ ನಿಲ್ಲಿಸಲಾಗಿತ್ತು. ಸ್ಪರ್ಧಾ ಅಖಾಡದ ಬಾಗಿಲು ತಗೆಯುತ್ತಿದ್ದಂತೆ ಹೋರಿಗಳ ಓಟ ಆರಂಭಗೊಂಡಿತ್ತು. ಇದರಲ್ಲಿ ಭಾಗಿಯಾಗಿದ್ದ ಫೈಲ್ವಾನರು ಎದೆಗುಂದದೆ ಹೋರಿ ಹಿಡಿಯಲು ಮುಂದಾಗುತ್ತಿದ್ದರು. ತಮ್ಮದೇ ಆದ ಪಟ್ಟುಗಳನ್ನು ಹಾಕಿ ಹೋರಿ ಹಿಡಿಯುವ ಪ್ರಯತ್ನ ಮಾಡಿದರು. ಕೆಲ ಹೋರಿಗಳನ್ನು ನೂರಾರು ಮೀಟರ್ ದೂರ ಓಡಿ ಯುವಕರ ಕೈಗೆ ಸಿಗದೆ ತಪ್ಪಿಸಿಕೊಂಡವು. ಈ ಸ್ಪರ್ಧೆ ನೋಡಲು ಸುತ್ತಮುತ್ತಲಿನ ಊರುಗಳಿಂದ ಹಲವಾರು ಜನರು ಆಗಮಿಸಿದ್ದರು.
ಸ್ಪರ್ಧೆ ಕುರಿತು ಮಾತನಾಡಿದ ಕಬ್ಬೂರು ಗ್ರಾಮಸ್ಥ ಶಿವಬಸಯ್ಯ, ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ದನ ಬೆದರಿಸುವ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ತಿಕೋತ್ಸವದ ಹಿನ್ನೆಲೆಯಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಕಬ್ಬೂರು ಸೇರಿದಂತೆ ಹಾವೇರಿ ಜಿಲ್ಲೆಯ ವಿವಿಧೆಡೆಯಿಂದ ಹೋರಿಗಳನ್ನ ಕರೆತರಲಾಗುತ್ತದೆ. ಪೀಪಿ(ಬಲೂನ್) ಹೋರಿ, ದಾಗೀನ ಹೋರಿ, ಹ್ಯಾಕ್ಸನ್ ಹೋರಿಗಳು ಬಂದಿರುತ್ತವೆ. ದನಬೆದರಿಸುವ ಸ್ಪರ್ಧೆಯಲ್ಲಿ ಗೆದ್ದಂತಹ ಫೈಲ್ವಾನರಿಗೆ ಬಹುಮಾನ ನೀಡಲಾಗುತ್ತದೆ. ಬೆಳ್ಳಿ ಕಡಗ ಸೇರಿದಂತೆ ವಿವಿಧ ಬಹುಮಾನಗಳನ್ನೂ ನೀಡಲಾಗುತ್ತದೆ ಎಂದು ಶಿವಬಸಯ್ಯ ತಿಳಿಸಿದರು.
ಬಳಿಕ ಮಾತನಾಡಿದ ನವಗ್ರಹ ಎಕ್ಸ್ಪ್ರೆಸ್ ಹೋರಿಯ ಮಾಲೀಕ ಬಸಪ್ಪ, ಸಿದ್ದಾಪುರ ಗ್ರಾಮದಿಂದ ಹಲವು ವರ್ಷದಿಂದ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು. ಹೋರಿಗೆ ವಿಶೇಷ ತಿನಿಸುಗಳಾದ ಹಿಂಡಿ, ಬೂಸಾ, ಹತ್ತಿಕಾಳು ನುಚ್ಚು, ಹುರುಳಿಕಾಯಿ ತಿನ್ನಿಸಿ ಈ ಸ್ಪರ್ಧೆಗೆ ಕರೆತರಲಾಗುತ್ತದೆ. ದೀಪಾವಳಿ ನಂತರ ನಡೆಯುವ ಹೋರಿಹಬ್ಬಗಳಲ್ಲಿ ಪಾಲ್ಗೊಳ್ಳುವುದೇ ವಿಶೇಷ ಎಂದು ಹೇಳಿದರು.
ಅದ್ಧೂರಿಯಾಗಿ ರಾಕ್ಸ್ಟಾರ್ ಜನ್ಮ ದಿನಾಚರಣೆ: ಕೆಳೆದ ವಾರ ಹೋರಿ ರಾಕ್ಸ್ಟಾರ್ ಜನ್ಮದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿತ್ತು. ಮಾಲೀಕ ಮತ್ತು ಅದರ ಅಭಿಮಾನಿಗಳು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದರು. ಜನ್ಮದಿನ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು. ಹಾವೇರಿ ನಡೆದ ದನಬೆದರಿಸುವ ಸ್ಪರ್ಧೆಗಳಲ್ಲಿ ಈ ಹೋರಿ ಸಾಕಷ್ಟು ಹೆಸರು ಮಾಡಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಹೊರ ರಾಜ್ಯವಾದ ತಮಿಳುನಾಡಿನಲ್ಲೂ ಸಹ ಇದು ತನ್ನ ವರಸೆ ತೋರಿಸಿ ಬಹುಮಾನಗಳನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ: ಕಲ್ಮೇಶ್ವರನಿಗೆ ಹುಟ್ಟುಹಬ್ಬ ಆಚರಣೆ: ದನಬೆದರಿಸುವ ಸ್ಪರ್ಧೆಯಲ್ಲಿ ಇವನೇ ಕಿಂಗ್