ಹಾವೇರಿ: ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.
ಶಿಗ್ಗಾವಿ ತಾಲೂಕಿನ ಶಾಬಾಳ ಗ್ರಾಮದಲ್ಲಿ ಮಳೆಯಿಂದ ಒಡೆದ ಕೆರೆ ವೀಕ್ಷಿಸಿ ಅವರು ಮಾತನಾಡಿದರು. ಇದೇ ವೇಳೆ ಸಿಎಂ ರೇಸ್ ಲಿಸ್ಟ್ನಲ್ಲಿ ನಾನಿಲ್ಲ. ಅದರ ಬಗ್ಗೆ ನಾನು ಚಿಂತನೆ ಮಾಡಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ದೊಡ್ಡ ಪ್ರಮಾಣದ ಮಳೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಕುಮದ್ವತಿ, ವರದಾ ಮತ್ತು ಧರ್ಮಾ ನದಿಗಳಿಂದ ಸಾಕಷ್ಟು ಹಾನಿಯುಂಟಾಗಿದೆ. ಹಿರೇಕೆರೂರು ಮತ್ತು ರಟ್ಟಿಹಳ್ಳಿಯಲ್ಲಿ ಕುಮದ್ವತಿ ನದಿ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಜಿಲ್ಲೆಯಲ್ಲಿ ಪ್ರವಾಹವುಂಟಾದ ಪ್ರದೇಶಗಳ ಸರ್ವೇ ಮಾಡಲು ಸೂಚಿಸಲಾಗಿದೆ. ಹಾಳಾದ ಮನೆಗಳಿಗೆ ಕೂಡಲೇ 10 ಸಾವಿರ ರೂಪಾಯಿ ನೀಡಲು ತಿಳಿಸಲಾಗಿದೆ ಎಂದರು.
ಒಡೆದ ಕೆರೆಕಟ್ಟೆಗಳನ್ನ ಶೀಘ್ರವೇ ದುರಸ್ತಿ ಮಾಡಲಾಗುವುದು. ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲು ಹೇಳಿದ್ದೇನೆ. ಪೂರ್ಣ ಬಿದ್ದ ಮನೆಗಳು ಮತ್ತು ಮಳೆಯಿಂದ ಬಿರುಕು ಮೂಡಿದ ಮನೆಗಳಿಗೆ ಹೊಸ ಮನೆಗಳನ್ನ ಕಟ್ಟಿಸುವ ಕುರಿತಂತೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಪ್ರಸ್ತುತ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ರೈತರಿಗೆ ಯೂರಿಯಾ ಗೊಬ್ಬರ ಕಡಿಮೆಯಾಗದಂತೆ ನೋಡಿಕೊಳ್ಳುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು.
ಹಾವೇರಿ: ಮಳೆ ಅವಾಂತರ... ಹಳ್ಳಿಗೆ ನುಗ್ಗಿದ ನದಿ ನೀರು... ಧರೆಗುರುಳಿದ ಮನೆಗಳು