ಹಾವೇರಿ: ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದ ಜಮೀನಿಗೆ ಮಳೆ ನೀರು ನುಗ್ಗಿದೆ. ಜಿಲ್ಲೆಯಲ್ಲಿ 25ಕ್ಕೂ ಅಧಿಕ ಮನೆಗಳು ಧರೆಗುರುಳಿವೆ. ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ವರದಾ, ತುಂಗಾಭದ್ರಾ, ಧರ್ಮಾ ಮತ್ತು ಕುಮದ್ವತಿ ನದಿಗಳು ಮೈದುಂಬಲಾರಂಭಿಸಿವೆ. ಮಳೆಯ ಜೊತೆ ಗಾಳಿ ಬೀಸಿದ್ದರಿಂದ ನೂರಾರು ಎಕರೆಯಲ್ಲಿ ಬೆಳೆದಿದ್ದ ವಿಳ್ಯೆದೆಲೆ ಬಳ್ಳಿಗಳು ನೆಲಕಚ್ಚಿವೆ.
ಹಾವೇರಿ ಜಿಲ್ಲೆ ಸವಣೂರು - ಹಾವೇರಿ ತಾಲೂಕುಗಳ ನೂರಾರು ಎಕರೆಯಲ್ಲಿ ಬೆಳೆದಿದ್ದ ವಿಳ್ಯೆದೆಲೆ ಬಳ್ಳಿಗಳು ನೀರಿಗಾಹುತಿಯಾಗಿವೆ. ಕೂಳೂರು ಗ್ರಾಮದ ಮಾರುತಿ ಬಂಕಾಪುರ ಬೆಳೆದಿದ್ದ ವಿಳ್ಯೆದೆಲೆ ನೀರಿನಲ್ಲಿ ಮಕಾಡೆ ಮಲಗಿದೆ. ಕಳೆದ ಎರಡು ವರ್ಷಗಳಿಂದ ಬೆಳೆದಿದ್ದ ವಿಳ್ಯೆದೆಲೆ ಇದೀಗ ಫಸಲು ಬಿಡಲಾರಂಭಿಸಿತ್ತು. ಇನ್ನೇನು ಕೊಯ್ಯಬೇಕು ಅನ್ನುವಷ್ಟರಲ್ಲಿ ಮಳೆ ಬಂದು ಎಲ್ಲ ನೀರಿನಲ್ಲಿ ಹೋಮ ಮಾಡಿದಂತಾಯಿತು ಎಂದು ಮಾರುತಿ ಬೇಸರ ವ್ಯಕ್ತಪಡಿಸಿದರು.
ಇನ್ನು ಮಾರುತಿ ಬಂಕಾಪುರ ಪಕ್ಕದಲ್ಲಿರುವ ಬಾಹುಬಲಿ ಕಳೆದ ನಾಲ್ಕು ವರ್ಷಗಳ ಹಿಂದೆ 25 ತೆಂಗಿನಮರ ನೆಟ್ಟಿದ್ದರು. ತೆಂಗಿನಮರಗಳು ಈ ವರ್ಷ ಕಾಯಿ ಬಿಡಲಾರಂಭಿಸಿದ್ದವು. ಆದರೆ, ಮೊದಲ ಫಸಲು ಕೈಸೇರುವ ಮುನ್ನ ತೆಂಗಿನಮರಗಳು ಉರುಳಿಬಿದ್ದಿವೆ. ಕಷ್ಟಪಟ್ಟು ಬೆಳೆದ ಕಲ್ಪವೃಕ್ಷಗಳು ಬೇರು ಸಮೇತ ಧರೆಗುರುಳಿವೆ. ಮುಂಗಾರು ಆರಂಭಕ್ಕೂ ಮುನ್ನ ಸುರಿದ ಅಕಾಲಿಕ ಮಳೆಗೆ ಹಾವೇರಿ ಜಿಲ್ಲೆಯ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ನೊಂದ ಜೀವಗಳಿಗೆ ಮನವಿಗೆ ಸ್ಪಂದಿಸಬೇಕಿದೆ.
ಇದನ್ನೂ ಓದಿ: ಮಳೆಗೆ ತತ್ತರಿಸಿದ ಬೆಂಗಳೂರು: ಜಿಲ್ಲಾ ಉಸ್ತುವಾರಿ ಬದಲಾಗುತ್ತಾ, ಸಿಎಂ ಪ್ಲಾನ್ ಏನು?