ಹಾವೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಜಾತ್ಯಾತೀತ ಅಂತ ಹೇಳಿಕೊಂಡು ಜಾತಿ ಹೆಸರಿನಲ್ಲಿ ನಾಯಕರಿಗೆ ಬೆಂಬಲ ಇದೆಯೋ ಇಲ್ಲವೊ ಎಂದು ಚಿಂತನೆ ಮಾಡಿರುವುದು ಸಣ್ಣತನ. ಅದರ ಮೇಲೆಯೆ ನೀವು ತಿಳಿದುಕೊಳ್ಳಬೇಕು ಅವರು ಜಾತ್ಯಾತೀತರೋ? ಕೋಮುವಾದಿಗಳೊ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದ ಮೇಲೆ ಉಪಚುನಾವಣೆಯ ಫಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ ರಾಜ್ಯ ಚೆನ್ನಾಗಿಯೇ ಇರುತ್ತೆ ಎಂದಿದ್ದಾರೆ. ಉಪಚುನಾವಣೆಯಲ್ಲಿ ಜೆಡಿಎಸ್ ಕನಿಷ್ಠ ಏಳೆಂಟು ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಉಪಚುನಾವಣೆಯಲ್ಲಿ ಜಯಗಳಿಸುವುದು ಸುಲಭವಲ್ಲ, ಸರ್ಕಾರ ರಚನೆಗೆ ಅವರು ತಗೆದುಕೊಂಡ ನಿರ್ಧಾರಗಳು ಮತ್ತು ನಂತರದ ಅವರ ನಡವಳಿಕೆ ನೋಡಿದರೆ ಬಿಜೆಪಿ ಜಯಗಳಿಸುವುದು ಬಹಳ ಕಷ್ಟವಿದೆ. ಸರ್ಕಾರ ಉಳಿಸಲು ವೈಯಕ್ತಿಕವಾಗಿ ನಾನು ಯಾರಿಗೂ ಪೋನ್ ಮಾಡಿಲ್ಲ. ಬಿ.ಸಿ.ಪಾಟೀಲ್ ನನ್ನ ಮೇಲೆ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ನಿಲುವುಗಳನ್ನು ನೋಡಿದರೆ ಆಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನ ಯಾರು ಬೇಕಾದರು ಊಹೆ ಮಾಡಬಹುದು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇದೇ ವೇಳೆ ಹಾವೇರಿ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಕುಮಾರಸ್ವಾಮಿ ಭೇಟಿ ನೀಡಿದರು. ತಾಲೂಕಿನ ಹಂದಿಗೆನೂರಿಗೆ ಭೇಟಿ ನೀಡಿದ ಅವರು ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಐದು ದಿನಗಳ ಹಿಂದೆ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಪರಮೇಶಪ್ಪ ಮತ್ತು ಪ್ರಶಾಂತ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಅಲ್ಲದೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಿದರು.