ಹಾವೇರಿ: ಜಿಲ್ಲೆಯ ಕಬ್ಬು ಬೆಳೆಗಾರರು ಪ್ರತಿವರ್ಷ ಒಂದಲ್ಲೊಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೀಗ ಈ ಸಮಸ್ಯೆಗಳಿಗೆ ಮುಕ್ತಾಯ ಹಾಡಲು ಬೆಳೆಗಾರರು ಮುಂದಾಗಿದ್ದು, ಹೆಚ್ಚಿನ ಆದಾಯ ಗಳಿಸುವ ಮಾರ್ಗ ಕಂಡುಕೊಂಡಿದ್ದಾರೆ.
ಕಬ್ಬಿಗೆ ಸೂಕ್ತ ಬೆಲೆ ಇಲ್ಲದಿರುವುದು, ನೀರಿನ ಸಮಸ್ಯೆ, ಬೆಳೆಗೆ ಕಾರ್ಖಾನೆಗಳು ಸಮಯಕ್ಕೆ ಸರಿಯಾಗಿ ಹಣ ಪಾವತಿಸದಿರುವುದು, ಕಾರ್ಮಿಕರ ಸಮಸ್ಯೆ.. ಹೀಗೆ ಅನೇಕ ಸಮಸ್ಯೆಗಳಿಂದ ರೈತರು ಕಂಗಾಲಾಗಿದ್ದರು.
ಇದರಿಂದ ಬೇಸತ್ತ ಬೆಳೆಗಾರರು ತಮ್ಮ ಜಮೀನುಗಳಲ್ಲಿ ಆಲೆಮಲೆಗಳನ್ನು ನಿರ್ಮಿಸಿ ತಾವೇ ಬೆಲ್ಲ ತಯಾರಿಸುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಜೊತೆಗೆ ಉತ್ತಮ ಆದಾಯವೂ ಕೈಸೇರುತ್ತಿದೆ.
ಆಲೆಮನೆ ಸ್ಥಾಪಿಸುವ ಕಬ್ಬು ಬೆಳೆಗಾರರು ಮೊದಲು ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬಿನಿಂದ ಬೆಲ್ಲ ತಯಾರಿಸುತ್ತಾರೆ. ನಂತರ ತಮ್ಮ ಜಮೀನಿನ ಅಕ್ಕಪಕ್ಕದ ಕಬ್ಬು ಬೆಳೆಗಾರರಿಂದ ಕಬ್ಬು ಖರೀದಿಸಿ ಬೆಲ್ಲ ತಯಾರಿಸುತ್ತಾರೆ. ರೈತರು ಆಲೆಮನೆಗಳಿಗೆ ಕಬ್ಬು ತಂದು ಹಾಕಿದರೆ ಮುಗೀತು. ಮುಂದಿನ ಎಲ್ಲ ಕೆಲಸವನ್ನೂ ಆಲೆಮನೆಗಳ ಮಾಲೀಕರೇ ನೋಡಿಕೊಳ್ಳುತ್ತಾರೆ.
ಕಾರ್ಖಾನೆಗಳ ದರ ನಿಗದಿಯಾಗಲಿ, ಹಣ ಪಾವತಿಯ ವಿಳಂಬವಾಗಲಿ ಇಲ್ಲ. ಬೇಕಾದರೆ ರೈತರು ತಾವೇ ಬೆಲ್ಲ ತಗೆದುಕೊಂಡು ಹೋಗಿ ಮಾರಾಟ ಮಾಡಬಹುದು. ಇಲ್ಲವೇ ಕೆಲ ವ್ಯಾಪಾರಸ್ಥರು ಆಲೆಮನೆಗಳಿಗೆ ಬಂದು ಬೆಲ್ಲ ಖರೀದಿಸುತ್ತಾರೆ. ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುವುದಕ್ಕಿಂತ ಈ ರೀತಿ ಬೆಲ್ಲ ತಯಾರಿಸುವುದು ತಮಗೆ ಲಾಭದಾಯಕ ಎನ್ನುತ್ತಾರೆ ಕಬ್ಬು ಬೆಳೆಗಾರರು.
ಓದಿ: ಪಶ್ಚಿಮ ಬಂಗಾಳದ ಅಧಿಕೃತ ಭಾಷೆಯಾಗಲಿರುವ ತೆಲುಗು : 'ಮಿನಿ ಆಂಧ್ರಪ್ರದೇಶ'ದಲ್ಲಿ ಸಂಭ್ರಮ
ದೀಪಾವಳಿ ನಂತರ ಆರಂಭವಾಗುವ ಆಲೆಮನೆಗಳು ಹಗಲುರಾತ್ರಿ ಈ ರೀತಿ ಬೆಲ್ಲ ತಯಾರಿಸುತ್ತವೆ. ಜಿಲ್ಲೆಯಲ್ಲಿ 40ಕ್ಕೂ ಅಧಿಕ ಆಲೆಮನೆಗಳಿದ್ದು, ಎಲ್ಲರೂ ಸ್ಥಳೀಯ ಜನರಿಗೆ ಉದ್ಯೋಗ ನೀಡುತ್ತಿವೆ. ಪ್ರತಿದಿನ 10 ಟನ್ಗಿಂತ ಅಧಿಕ ಕಬ್ಬನ್ನು ಇಲ್ಲಿ ನುರಿಸಲಾಗುತ್ತಿದೆ. ಸದ್ಯ ಬೆಲ್ಲದ ದರ ಕೆ.ಜಿಗೆ 28 ರೂ. ಇದೆ. ಇದೇ ದರ 30 ರೂಪಾಯಿಗೆ ಏರಿಕೆಯಾದರೆ ತಮಗೆ ಅಧಿಕ ಲಾಭ ಸಿಗುತ್ತದೆ ಅನ್ನೋದು ಬೆಲ್ಲ ತಯಾರಕರ ಅಂಬೋಣ.