ಹಾವೇರಿ: ರಾಜ್ಯದಲ್ಲಿ ಕುರಿ ಅಥವಾ ಮೇಕೆ ಆಕಾಲಿಕವಾಗಿ ಸಾವನ್ನಪ್ಪಿದರೆ ಅಥವಾ ಸಿಡಿಲು ಬಡಿದು ರೋಗರುಜಿನಗಳಿಂದ ಹಾಗೂ ಯಾವುದಾದರೂ ಕಾರಣಗಳಿಂದ ಮೃತಪಟ್ಟಿದ್ದರೆ, ನೆರವು ನೀಡುವ ಉದ್ದೇಶದಿಂದ ಸರ್ಕಾರ ಅನುಗ್ರಹ ಯೋಜನೆ ಆರಂಭಿಸಿತ್ತು. ಇದೀಗ ಈ ಯೋಜನೆಯಡಿ ಪರಿಹಾರ ಬರುತ್ತಿಲ್ಲ ಎಂದು ಕುರಿಗಾರರು ಆರೋಪಿಸಿದ್ದಾರೆ.
ದೊಡ್ಡ ಕುರಿ ಸಾವನ್ನಪ್ಪಿದ್ದರೆ 5 ಸಾವಿರ, ಸಣ್ಣಕುರಿ ಸಾವನ್ನಪ್ಪಿದ್ದರೆ 3,500 ರೂಪಾಯಿ ಪರಿಹಾರ ನೀಡುವ ಯೋಜನೆ ಇದಾಗಿತ್ತು. ಈ ಹಿನ್ನೆಲೆಯಲ್ಲಿ ಕುರಿಗಾರರು ತಮ್ಮ ಕುರಿಗಳು ಅಕಾಲಿಕವಾಗಿ ಸಾವನ್ನಪ್ಪಿದರೆ ಅದರ ಮರಣೋತ್ತರ ಪರೀಕ್ಷೆ ನಡೆಸಿ, ಫೋಟೋ ತೆಗೆದು ಪಶುಸಂಗೋಪನೆ ಇಲಾಖೆಗೆ ವರದಿ ಸಲ್ಲಿಸಿದ ಕೆಲ ದಿನಗಳ ನಂತರ ಪರಿಹಾರವಾಗಿ 5 ಸಾವಿರ ರೂಪಾಯಿ ಸಿಗುತ್ತಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಈ ಅನುಗ್ರಹ ಯೋಜನೆಯಲ್ಲಿ ಪರಿಹಾರ ಬರುತ್ತಿಲ್ಲ ಎಂದು ಹಾವೇರಿಯ ಕುರಿಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಹಾವೇರಿ ತಾಲೂಕಿನ ಹೊಸರಿತ್ತಿ ಕುರಿಗಾರ ನಾಗರಾಜ್ ಮಾತನಾಡಿ, "ಕಳೆದ ಹಲವು ದಿನಗಳಿಂದ ಈ ಯೋಜನೆಯಲ್ಲಿ ಹಣ ಬರುತ್ತಿಲ್ಲ. ಕೆಲವೇ ತಿಂಗಳುಗಳ ಅಂತರದಲ್ಲಿ ಕುರಿದೊಡ್ಡಿಯಲ್ಲಿ ಸುಮಾರು 15 ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿವೆ. ಸತ್ತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಇಲಾಖೆಗೆ ಫೋಟೋ ನೀಡುವುದೇ ಒಂದು ಕೆಲಸವಾಗಿದೆ. ತಾಲೂಕು ಕೇಂದ್ರಗಳಲ್ಲಿ ವೈದ್ಯರಿಲ್ಲದ ಕಾರಣ ಹಾವೇರಿ ಜಿಲ್ಲಾ ಪಶು ಆಸ್ಪತ್ರೆಗೆ ಕುರಿಗಳ ಮೃತದೇಹ ತಂದು ಮರಣೋತ್ತರ ಪರೀಕ್ಷೆ ನಡೆಸಬೇಕು. ಆದರೆ, ಪರಿಹಾರ ಮಾತ್ರ ಬಂದಿಲ್ಲ. ಈ ಕುರಿತಂತೆ ಅಧಿಕಾರಿಗಳನ್ನು ಕೇಳಿದರೆ, ಬರುತ್ತೆ ಬರುತ್ತೆ" ಎನ್ನುತ್ತಾರೆ ಎಂದು ಆರೋಪಿಸಿದರು.
ಈ ಕುರಿತಂತೆ ಮಾತನಾಡಿದ ಹಾವೇರಿ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ, ಸರ್ಕಾರದಿಂದಲೇ ಪರಿಹಾರ ಬಂದಿಲ್ಲ. ಹೀಗಾಗಿ, ಸತ್ತ ಕುರಿಗಳಿಗೆ ಸಿಗಬೇಕಾಗಿದ್ದ ಅನುಗ್ರಹ ಯೋಜನೆಯ ಪರಿಹಾರ ನೀಡಲಾಗುತ್ತಿಲ್ಲ. ಜಿಲ್ಲೆಗೆ ನವೆಂಬರ್ 2021ರ ವರೆಗೆ ಮಾತ್ರ ಈ ಯೋಜನೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. 2021 ಡಿಸೆಂಬರ್ನಿಂದ 2023ರ ಮಾರ್ಚ್ವರೆಗೆ ಸರ್ಕಾರ ಹಣ ನೀಡಿಲ್ಲ. ಹಾವೇರಿ ಜಿಲ್ಲೆಯೊಂದರಲ್ಲಿ ಈ ರೀತಿ 18,000 ಕುರಿಗಳು ಸಾವನ್ನಪ್ಪಿವೆ. ಜಿಲ್ಲೆಗೆ ಸುಮಾರು 9 ಕೋಟಿ ರೂಪಾಯಿ ಪರಿಹಾರ ಬರಬೇಕಿದೆ ಎಂದರು.
ಅನುಗ್ರಹ ಯೋಜನೆಯನ್ನು ಈ ವರ್ಷದ ಏಪ್ರಿಲ್ 1 ರಿಂದ ಸ್ಥಗಿತ ಮಾಡಲಾಗಿತ್ತು. ಮತ್ತೆ ಸೆಪ್ಟೆಂಬರ್ನಿಂದ ಯೋಜನೆ ಆರಂಭವಾಗಿದೆ. ಜಿಲ್ಲೆಯಲ್ಲಿ 2023ರ ಸೆಪ್ಟಂಬರ್ ಬಳಿಕ ಇಲ್ಲಿಯವರೆಗೆ ಸುಮಾರು 800 ಕುರಿಗಳು ಸಾವನ್ನಪ್ಪಿವೆ. ಈ ಕುರಿತಂತೆ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 1,34,195 ಕುರಿ, ಮೇಕೆಗಳು ವಿವಿಧ ಅವಘಡಗಳಲ್ಲಿ, ಪ್ರಕೃತಿ ವಿಕೋಪ, ರೋಗ ರುಜಿನಗಳಿಗೆ ತುತ್ತಾಗಿ ಸಾವನ್ನಪ್ಪಿವೆ. ಈ ಪ್ರಕರಣಗಳಿಗೆ 65 ಕೋಟಿ ರೂಪಾಯಿಗೂ ಹೆಚ್ಚು ಪರಿಹಾರ ವಿತರಣೆ ಆಗಬೇಕಿದೆ.
ಇದನ್ನೂ ಓದಿ : MPSC ಉತ್ತೀರ್ಣವಾದರೂ ಆಗದ ನೇಮಕಾತಿ : ಕುರಿ ಮೇಯಿಸುತ್ತಿರುವ ಭಾವಿ ಅಧಿಕಾರಿ