ಹಾವೇರಿ: ಹಾವೇರಿ ಎಸ್ಸಿ ಮೀಸಲು ಕ್ಷೇತ್ರದ ಪ್ರಬಲ ಅಕಾಂಕ್ಷಿ ಹಾಗೂ ಹಾಲಿ ಶಾಸಕ ನೆಹರು ಓಲೇಕಾರ್ ಬದಲು ಬಿಜೆಪಿ ಹೈಕಮಾಂಡ್ ಗವಿಸಿದ್ದಪ್ಪ ದ್ಯಾಮಣ್ಣನವರಿಗೆ ಟಿಕೆಟ್ ನೀಡಿದ್ದು, ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಹಾಲಿ ಶಾಸಕ ನೆಹರು ಓಲೇಕಾರ್ ಹಾಗೂ ಅವರ ಅಭಿಮಾನಿಗಳು ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಬೆಂಬಲಿಗರ ಜೊತೆ ಹಾವೇರಿಯ ತಮ್ಮ ಸ್ವಗೃಹದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದ ಅವರು, ಟಿಕೆಟ್ ಕೈ ತಪ್ಪಲು ಬೊಮ್ಮಾಯಿ ಕಾರಣ ಎಂದು ಆರೋಪಿಸಿ, 40 ಪರ್ಸೆಂಟ್ ಸರ್ಕಾರದ ಏಜೆಂಟ್ ಬೊಮ್ಮಾಯಿ ಘೋಷಣೆ ಕೂಗಿ ಅಸಮಾಧಾನ ಹೊರಹಾಕಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ಟಿಕೆಟ್ ಸಿಗದ ಕಾರಣ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ಜೊತೆ ಸಾವಿರಾರು ಕಾರ್ಯಕರ್ತರು ಬಿಜೆಪಿಗೆ ರಾಜೀನಾಮೆ ನೀಡಿಲಿದ್ದಾರೆ" ಎಂದು ತಿಳಿಸಿದರು. ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿತರಾಗಿದ್ದ ನಾರಾಯಣಿ ಮತ್ತು ರಾಮು ಮಾಳಗಿ ಅವರು ಸಹ ನೆಹರು ಓಲರಕರ್ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಶಿವರಾಜ್ ಸಜ್ಜನರ್ ಅವರಿಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಹೈಕಮಾಂಡ್ ವಿರುದ್ಧ ಸ್ಥಳೀಯ ಮುಖಂಡರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಟಿಕೆಟ್ ಆಕಾಂಕ್ಷಿ ಮಾಲತೇಶ ಸೊಪ್ಪಿನ ಮಾತನಾಡಿ, "ಎರಡು ದಶಕಗಳಿಂದ ಬಿಜೆಪಿ ಪಕ್ಷಕ್ಕಾಗಿ ದುಡಿದಿದ್ದೇನೆ. ಕಳೆದ ಉಪ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗಬೇಕಾಗಿತ್ತು. ಆದರೆ ಸಿಗಲಿಲ್ಲಾ. ಈ ಬಾರಿಯಾದರು ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಈ ಬಾರಿಯೂ ಸಿಗಲಿಲ್ಲಾ. ಬಿಜೆಪಿ ಹೈಕಮಾಂಡ್ ಸ್ಥಳೀಯರಿಗೆ ಟಿಕೆಟ್ ನೀಡದೆ ಹೊರಗಿನವರಿಗೆ ನೀಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬ್ಯಾಡಗಿ ಕ್ಷೇತ್ರಕ್ಕೆ ಬಿಜೆಪಿ ವಿರೂಪಾಕ್ಷಪ್ಪ ಬಳ್ಳಾರಿಗೆ ಟಿಕೆಟ್ ನೀಡಿರುವುದಕ್ಕೆ ಬ್ಯಾಡಗಿ ಮಾಜಿ ಶಾಸಕ ಸುರೇಶಗೌಡ ಪಾಟೀಲ್ ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ
ಗುರುವಾರ ಬ್ಯಾಡಗಿಯ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಸುರೇಶ್ ಗೌಡ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೂಚಿಸಿದರು.
ರಾಣೆಬೆನ್ನೂರು ಹಾಲಿ ಶಾಸಕ ಅರುಣಕುಮಾರ್‌ಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು ಉಳಿದ ಅಕಾಂಕ್ಷಿತರಿಗೆ ಅಸಮಾಧಾನ ಉಂಟುಮಾಡಿದೆ. ಈ ಕುರಿತಂತೆ ಮಾತನಾಡಿದ ಟಿಕೆಟ್ ಅಕಾಂಕ್ಷಿ ಸಂತೋಷ ಕುಮಾರ್ ಪಾಟೀಲ್ ಅರುಣ ಕುಮಾರ್ ಯಾವ ಕಾರಣಕ್ಕೆ ಟಿಕೆಟ್ ನೀಡಲಾಗಿದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬಿಜೆಪಿಯಿಂದ ಬಿ ಫಾರಂ ವಿತರಣೆ: ಚಿತ್ರದುರ್ಗದಿಂದ ಕಣದಲ್ಲಿದ್ದಾರೆ 75ರ ಜಿ.ತಿಪ್ಪಾರೆಡ್ಡಿ