ಹಾವೇರಿ: ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಮಧ್ಯಾಹ್ನ ಕೊರೊನಾ ಲಸಿಕೆಗಳು ಖಾಲಿಯಾಗಿದ್ದವು. ಲಸಿಕೆ ಹಾಕಿಸಿಕೊಳ್ಳಲು ಬಂದ ನೂರಾರು ಜನ ಲಸಿಕೆ ಹಾಕಿಸಿಕೊಳ್ಳಲಾಗದೆ ಮನೆಗೆ ವಾಪಸ್ಸಾಗಿದ್ದರು.
ಶುಕ್ರವಾರ ರಾತ್ರಿ ಲಸಿಕೆಗಳನ್ನ ಆರೋಗ್ಯ ಇಲಾಖೆ ತರಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಮುಂಜಾನೆಯಿಂದ ಲಸಿಕೆ ಹಾಕಲಾರಂಭಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ 45 ವಯಸ್ಸು ಮೇಲ್ಪಟ್ಟವರು ಅಧಿಕ ಸಂಖ್ಯೆಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದರು. ಸಾಮಾಜಿಕ ಅಂತರವಿಲ್ಲದೆ ಸರತಿಯಲ್ಲಿ ನಿಂತು ಚೀಟಿ ಪಡೆದು ಲಸಿಕೆ ಹಾಕಿಸಿಕೊಂಡರು.
ಕೆಲವರು ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು. ಇದ್ದಕ್ಕಿದ್ದಂತೆ ಲಸಿಕೆ ಖಾಲಿಯಾದರೆ ಹೇಗೆ ಮೊದಲೆ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ತಾಕೀತು ಮಾಡಿದರು. ಮುಂದಿನ ದಿನಗಳಲ್ಲಿಯಾದರು ಈ ರೀತಿಯಾಗದಂತೆ ನೋಡಿಕೊಳ್ಳುವಂತೆ ತಿಳಿಸಿದರು.
ಲಸಿಕಾ ಕೇಂದ್ರಕ್ಕೆ ಹಾವೇರಿ ಜಿಲ್ಲಾಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಪರಮೇಶ್ ಹಾವನೂರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂಜಾಗೃತಾಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.