ಹಾವೇರಿ : ಒಣ ಮೆಣಸಿನಕಾಯಿ ಮಾರುಕಟ್ಟೆಗೆ ವಿಶ್ವಪ್ರಸಿದ್ದಿಯಾಗಿರುವ ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಮಾರುಕಟ್ಟೆಯಲ್ಲಿ ಸೋಮವಾರ 3,577 ಚೀಲ ಒಣಮೆಣಸಿನಕಾಯಿ ಮಾರಾಟಕ್ಕಿಡಲಾಗಿತ್ತು. ಇವುಗಳಲ್ಲಿ ಕಡ್ಡಿ, ಡಬ್ಬಿ ಮತ್ತು ಗುಂಟೂರು ತಳಿಯ ಮೆಣಸಿನಕಾಯಿ ಮಾರಾಟವಾಗಿದೆ.
ಈ ಬಗ್ಗೆ ಮಾತನಾಡಿರುವ ಮೆಣಸಿನಕಾಯಿ ವರ್ತಕ ರಾಜು ಮೋಗೇರಿ, ಕಳೆದೆರಡು ವರ್ಷಗಳ ಮಾರುಕಟ್ಟೆ ನೋಡಿದರೆ ಈ ವರ್ಷ ಉತ್ತಮ ವಾತಾವರಣವಿದೆ. ಈ ಹಿಂದೆ ಕೊರೊನಾ ಕರಿನೆರಳು ಮಾರುಕಟ್ಟೆಯ ಆವಕದ ಮೇಲೆ ಪರಿಣಾಮ ಬೀರಿತ್ತು. ಪ್ರಸ್ತುತ ವರ್ಷದ ಏಪ್ರಿಲ್, ಮೇ ತಿಂಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಯಲ್ಲಿ ಆವಕವಾಗಿದ್ದವು. ದರ ಕಡಿಮೆಯಾಗಿ ರೈತರು ತಮ್ಮ ಮೆಣಸಿನಕಾಯಿ ಚೀಲಗಳನ್ನು ಬ್ಯಾಡಗಿ ನಗರದಲ್ಲಿರುವ ಸುಮಾರು 30 ಶೀಥಲಿಕರಣ ಘಟಕಗಳಲ್ಲಿ (ಕೋಲ್ಟ್ ಸ್ಟೋರೇಜ್) ಭರ್ತಿ ಮಾಡಿದ್ದರು.
ಇದೀಗ ರೈತರು ಶೀಥಲೀಕರಣ ಘಟಕದಲ್ಲಿರುವ ಮೆಣಸಿನಕಾಯಿ ಚೀಲಗಳನ್ನು ಮಾರುಕಟ್ಟೆಗೆ ತಂದು ಮಾರಾಟಕ್ಕೆ ಇಡುತ್ತಿದ್ದಾರೆ. ಮಾರಾಟಕ್ಕಿಟ್ಟ ಚೀಲಗಳಿಗೆ ಉತ್ತಮ ದರ ಸಿಕ್ಕರೆ ಉಳಿದ ಚೀಲಗಳನ್ನು ಮಾರಾಟ ಮಾಡುವ ಮೂಲಕ ರೈತರು ಲಾಭ ಪಡೆಯುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಡಿಲಕ್ಸ್ ಮೆಣಸಿನಕಾಯಿ ಆವಕ ಕಡಿಮೆಯಿದೆ. ಅದನ್ನು ಬಿಟ್ಟರೆ ಎರಡನೇಯ ಕ್ವಾಲಿಟಿ ಮತ್ತು ಮೂರನೇ ಕ್ವಾಲಿಟಿ ಮೆಣಸಿನಕಾಯಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಹೇಳಿದರು.
ಪ್ರಸ್ತುತ ವರ್ಷ ಸುರಿದ ಸತತ ಮಳೆಯಿಂದ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಬ್ಯಾಡಗಿ ಮೆಣಸಿನಕಾಯಿ ಕಡ್ಡಿ, ಡಬ್ಬಿ ಮತ್ತು ಡಿಲಕ್ಸ್ ತಳಿಗಳು ಬೆಳೆಯುವುದು ಕರಿಮಣ್ಣಿನಲ್ಲಿ. ಧಾರವಾಡ ಕುಂದಗೋಳ ಮತ್ತು ಗದಗ ಜಿಲ್ಲೆಯಲ್ಲಿ ಹಲವು ರೈತರು ಈ ತಳಿಯ ಮೆಣಸಿನಕಾಯಿ ಬೆಳೆಯುತ್ತಾರೆ. ಅಲ್ಲದೇ ಈ ಪ್ರದೇಶಗಳು ಮಳೆ ಆಧಾರಿತವಾಗಿದ್ದು 15 ರಿಂದ 20 ದಿನಕ್ಕೆ ಮಳೆ ಬಂದರೆ ಉತ್ತಮ ಬೆಳೆ ಬರುತ್ತದೆ. ಇದೀಗ ಉತ್ತಮ ಮಳೆಯಾಗಿದ್ದು, ಬರುವ ಸೀಜನ್‌ನಲ್ಲಿ ಅತಿಹೆಚ್ಚು ಮೆಣಸಿನಕಾಯಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎಂದು ರಾಜು ಮೋಗೇರಿ ತಿಳಿಸಿದರು.
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಪ್ರಮುಖವಾಗಿ ತುಂಗಭದ್ರಾ ಡ್ಯಾಮ್ ಮತ್ತು ಆಲಮಟ್ಟಿ ಡ್ಯಾಮ್ ಭರ್ತಿಯಾದರೆ ಸೊಂಪಾದ ಬೆಳೆ ಬರುತ್ತೆ. ಮೆಣಸಿನಕಾಯಿ ಆವಕದಲ್ಲಿ ಸಹ ಅಧಿಕವಾಗುತ್ತೆ. ಈ ವರ್ಷ ಎರಡು ಡ್ಯಾಮ್‌ಗಳು ಪ್ರತಿಶತ 85ರಷ್ಟು ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಮೆಣಸಿನಕಾಯಿ ಬೆಳೆಗೆ ಯಾವುದೇ ರೋಗಗಳು ಕಾಣಿಸಿಕೊಳ್ಳದಿದ್ದರೆ ಉತ್ತಮ ಫಸಲು ಬರಲಿದೆ.
ಇನ್ನೇನು ಶ್ರಾವಣ ಮಾಸ ಆರಂಭವಾಗುತ್ತಿದ್ದು, ಹಬ್ಬಗಳು ಸರತಿಯಲ್ಲಿ ಆಗಮಿಸುತ್ತವೆ. ಈ ದಿನಗಳಲ್ಲಿ ಮೆಣಸಿನಕಾಯಿಗೆ ಹೆಚ್ಚು ಬೇಡಿಕೆ ಬರಲಿದೆ. ಇದರಿಂದ ಮೆಣಸಿನಕಾಯಿಗೆ ಸಹ ಹಚ್ಚು ಬೆಲೆ ಬರುವ ಸಾಧ್ಯತೆ ಇದೆ. ವಿಶ್ವದಲ್ಲಿ ಅತ್ಯಾಧುನಿಕ ಮತ್ತು ರೈತರಿಗೆ ಪ್ರಾಧಾನ್ಯತೆ ನೀಡುವ ಮಾರುಕಟ್ಟೆ ನಮ್ಮದಾಗಿದೆ. ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ 55 ಸಾವಿರದಿಂದ 60 ಸಾವಿರದವರೆಗೆ ಇದೆ. ಕೆಡಿಎಲ್ ಬ್ಯಾಡಗಿ 48 ಸಾವಿರದಿಂದ 54 ಸಾವಿರ ರೂಪಾಯಿವರೆಗೆ ಇದೆ ಎಂದು ರಾಜು ಮೋಗೇರಿ ಮಾಹಿತಿ ನೀಡಿದರು.
ಇದನ್ನೂ ಓದಿ : Coffee Price: ಟೊಮೆಟೊ ಆಯ್ತು ಇದೀಗ ಕಾಫಿ ಬೆಳೆಗಾರರಲ್ಲಿ ಸಂತಸ; ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಏರಿಕೆ