ಹಾವೇರಿ : ಕಳೆದ ಎಂಟು ವರ್ಷಗಳಿಂದ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆಯ ಅಪರಾಧ ಪತ್ತೆ ದಳದ ಶ್ವಾನ ಜ್ಯೂಲಿ ಮೃತಪಟ್ಟಿದೆ. ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜ್ಯೂಲಿ ಶುಕ್ರವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಮೃತ ಶ್ವಾನ ಜ್ಯೂಲಿ 10-02-2015 ರಿಂದ ಹಾವೇರಿ ಪೊಲೀಸ್ ಇಲಾಖೆಯ ಅಪರಾಧ ಪತ್ತೆ ದಳದ ಸದಸ್ಯಳಾಗಿ ಕಾರ್ಯನಿರ್ವಹಿಸುತ್ತಿತ್ತು.
ಅಪರಾಧ ಪತ್ತೆ ವಿಭಾಗದ ಪ್ರಮುಖ ಶ್ವಾನವಾಗಿದ್ದ ಜ್ಯೂಲಿ ಜಿಲ್ಲೆಯಲ್ಲಿ ನಡೆದ 171 ಅಪರಾಧ ಪ್ರಕರಣಗಳ ಆರೋಪಿಗಳ ಪತ್ತೆಗೆ ಹಾಜರಾಗಿತ್ತು. ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ನಡೆದ ನಾಲ್ಕು ಕೊಲೆ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಜ್ಯೂಲಿಯ ಅಂತ್ಯಕ್ರಿಯೆಯನ್ನು ಪೊಲೀಸ್ ಇಲಾಖೆ ಹಾವೇರಿ ಸಮೀಪದ ಕೆರಿಮತ್ತಿಹಳ್ಳಿಯಲ್ಲಿ ನಡೆಸಿತು.
ಅರ್ಚಕರನ್ನು ಕರೆತಂದು ಅಂತಿಮ ವಿಧಿವಿಧಾನಗಳನ್ನ ಪೂರೈಸಲಾಯಿತು. ನಂತರ ಪೊಲೀಸ್ ಅಧಿಕಾರಿಗಳು ಅಗಲಿದ ಜ್ಯೂಲಿಗೆ ಹೂಗುಚ್ಚ ಇಟ್ಟು ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗೌರವ ಸಲ್ಲಿಸಿದರು. ಹಾವೇರಿ ಎಸ್ಪಿ ಹನುಮಂತರಾಯ, ಎಎಸ್ಪಿ ವಿಜಯಕುಮಾರ್ ಜ್ಯೂಲಿಯ ಅಂತಿಮ ದರ್ಶನ ಪಡೆದರು.
ಇದನ್ನೂ ಓದಿ : ಕೊಡಗಿನಲ್ಲಿ ಭಾರಿ ಪ್ರಮಾಣದ ಮಣ್ಣು ಕುಸಿತ : ಅರ್ಚಕರ ಮನೆ ಮೇಲೆ ಬಿದ್ದ ಮಣ್ಣು ಆತಂಕದಲ್ಲಿ ಕುಟುಂಬ