ಹಾವೇರಿ : ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಬ್ಯಾಡಗಿ ಪುರಸಭೆಯಲ್ಲಿ ಮತದಾರ ಕಮಲ ಮುಡಿದಿದ್ದರೇ ಶಿಗ್ಗಾವಿ ಪುರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಿಸಿದ್ದಾನೆ.
ಎರಡು ಪುರಸಭೆಗಳ ತಲಾ 23 ವಾರ್ಡಗಳಿಗೆ ಮತದಾನ ನಡೆದಿತ್ತು. ಬ್ಯಾಡಗಿಯಲ್ಲಿ 23 ರಲ್ಲಿ 13 ಸ್ಥಾನ ಬಿಜೆಪಿಗೆ ನೀಡುವ ಮೂಲಕ ನಿಚ್ಚಳ ಬಹುಮತ ನೀಡಿದ್ದಾನೆ. ಆದರೆ ಶಿಗ್ಗಾವಿಯಲ್ಲಿ ಬಿಜೆಪಿಗೆ 9 ಸ್ಥಾನ ನೀಡಿದ್ದರೆ ಪಕ್ಷೇತರರಿಗೆ 8 ಸ್ಥಾನ ಮತ್ತು ಕಾಂಗ್ರೆಸ್ಸಿಗೆ 6 ಸ್ಥಾನಗಳನ್ನ ನೀಡಿದ್ದಾನೆ. ಶಿಗ್ಗಾವಿಯಲ್ಲಿ ಪಕ್ಷೇತರರು ನಿರ್ಣಾಯಕರಾಗಿದ್ದು ಅವರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಗಳಿವೆ.
ಇದೇ 29 ರಂದು ನಡೆದಿದ್ದ ಹಾವೇರಿ ಜಿಲ್ಲೆಯ ಬ್ಯಾಡಗಿ ಮತ್ತು ಶಿಗ್ಗಾವಿ ಪುರಸಭೆಗಳ ಫಲಿತಾಂಶ ಹೊರಬಿದ್ದಿದೆ. ಬ್ಯಾಡಗಿ ಪುರಸಭೆಯಲ್ಲಿ ಒಟ್ಟು 23 ವಾರ್ಡಗಳಿದ್ದು ಇಲ್ಲಿಯ ಮತದಾರ 13 ವಾರ್ಡಗಳಲ್ಲಿ ಕಮಲ ಮುಡಿದಿದ್ದಾನೆ. ಪರಿಣಾಮ ಇಲ್ಲಿ ಬಿಜೆಪಿ ಪಕ್ಷ ನಿಚ್ಚಳ ಬಹುಮತ ಪಡೆದಿದ್ದು ಬ್ಯಾಡಗಿ ಪುರಸಭೆ ಕಮಲ ಪಾಳಯದ ಪಾಲಾಗಿದೆ.
ಇನ್ನು ಬ್ಯಾಡಗಿ 20 ನೇ ವಾರ್ಡನಿಂದ ಸ್ಪರ್ಧಿಸಿದ್ದ ಬಿಜೆಪಿಯ ಮಾಜಿ ಶಾಸಕ ಸುರೇಶಗೌಡ ಪಾಟೀಲ್ ಪುತ್ರ ಬಾಲಚಂದ್ರ ಜಯಭೇರಿ ಬಾರಿಸಿದ್ದಾರೆ. ಉಳಿದಂತೆ ಕಾಂಗ್ರೆಸ್ ಆರು ಸ್ಥಾನ ಪಡೆದರೇ ಪಕ್ಷೇತರರು ನಾಲ್ಕು ಸ್ಥಾನಗಳಿಸಿದ್ದಾರೆ.
ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರ ಶಿಗ್ಗಾವಿ ಪುರಸಭೆಯಲ್ಲಿ ಮತದಾರ ಅತಂತ್ರ ಫಲಿತಾಂಶ ನೀಡಿದ್ದಾನೆ. 23 ವಾರ್ಡಗಳಲ್ಲಿ 9 ವಾರ್ಡಗಳಲ್ಲಿ ಬಿಜೆಪಿ ಗೆಲ್ಲಿಸಿದ್ದರೆ 8 ವಾರ್ಡಗಳಲ್ಲಿ ಪಕ್ಷೇತರರಿಗೆ ಮಣೆಹಾಕಿದ್ದಾನೆ. ಉಳಿದಂತೆ ಕಾಂಗ್ರೆಸ್ ಪಕ್ಷಕ್ಕೆ ಆರು ಸ್ಥಾನ ನೀಡಿದ್ದು ಅತಂತ್ರ ಫಲಿತಾಂಶ ನಿರ್ಮಾಣವಾಗಿದೆ. ಬಿಜೆಪಿ ಬಿಟ್ಟರೆ ಅತಿಹೆಚ್ಚು ಸ್ಥಾನಗಳನ್ನ ಪಕ್ಷೇತರ ಅಭ್ಯರ್ಥಿಗಳು ಗಳಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳು ಕಮಲ ಪಾಳಯಕ್ಕೆ ಬೆಂಬಲ ನೀಡುವ ಸಾಧ್ಯತೆಗಳಿದ್ದು ಶಿಗ್ಗಾವಿ ಪುರಸಭೆ ಬಿಜೆಪಿ ತೆಕ್ಕೆಗೆ ಬಂದರೆ ಆಶ್ಚರ್ಯಪಡಬೇಕಾಗಿಲ್ಲಾ. ಇನ್ನು ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ.