ಹಾವೇರಿ: ಕೈಗಾರಿಕಾ ಕಾರಿಡಾರ್‌ಗೆ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಹಾವೇರಿ ಜಿಲ್ಲಾ ರೈತ ಸಂಘ ಪ್ರತಿಭಟನೆ ನಡೆಸಿದೆ. ಬ್ಯಾಡಗಿ ತಾಲೂಕು ಮೋಟೆಬೆನ್ನೂರು ಗ್ರಾಮದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಸ್ತೆ ತಡೆ ನಡೆಸುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಫಲವತ್ತಾದ 1,017 ಎಕರೆ ಭೂಮಿಯನ್ನು ಕೈಗಾರಿಕೆಗಳಿಗೆ ಸ್ವಾಧೀನಪಡಿಸಿಕೊಳ್ಳಲು ಆದೇಶಿಸಿದೆ. ಈ ಕೂಡಲೇ ಆದೇಶ ವಾಪಸ್ ಪಡೆಯಬೇಕು. ಫಲವತ್ತಾದ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಿಕೊಳ್ಳಲು ಅನುಮತಿ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ಸರ್ಕಾರ ವಶಪಡಿಸಿಕೊಳ್ಳಲು ಮುಂದಾದ ಭೂಮಿಯಲ್ಲಿ ತೆಂಗು, ಅಡಿಕೆ, ಮಾವು, ಮೆಕ್ಕೆಜೋಳ, ಶೇಂಗಾ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಈ ಆಸ್ತಿ ನಮ್ಮ ಪೂರ್ವಜರದ್ದು. ಅಲ್ಲಿಯೇ ನಮ್ಮ ಹಿರಿಯರ ಅಂತ್ಯಕ್ರಿಯೆಗಳೆಲ್ಲ ನಡೆದಿದೆ. ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ ಎಂದರು. ಪ್ರತಿಭಟನೆಯಲ್ಲಿ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಪಾಲ್ಗೊಂಡಿದ್ದರು.
ರೈತರು ಆತಂಕಪಡುವ ಅವಶ್ಯಕತೆ ಇಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈ ಕುರಿತಂತೆ ಈಗಾಗಲೇ ಸಿಎಂ ಮತ್ತು ಸಂಬಂಧಿಸಿದ ಸಚಿವರ ಜೊತೆ ಮಾತನಾಡಿದ್ದೇನೆ. ನಮ್ಮ ಸರ್ಕಾರ ರೈತರ ಪರವಾಗಿದೆ. ಯಾವುದೇ ಕಾರಣಕ್ಕೂ ರೈತರು ಭೂಮಿ ವಶಪಡಿಸಿಕೊಳ್ಳಲು ಹೋಗುವುದಿಲ್ಲ. ಆತಂಕ ಬೇಡ ಎಂದು ಧೈರ್ಯ ತುಂಬಿದರು.
ಇದೇ ವೇಳೆ ಮಾತನಾಡಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಸರ್ಕಾರ ಬ್ಯಾಡಗಿ ಸಮೀಪ ಇರುವ ಬರಡು ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಲಿ. ಅದನ್ನು ನಾವು ಸ್ವಾಗತಿಸುತ್ತೇವೆ. ಸರ್ಕಾರ ಭೂಸ್ವಾಧೀನಕ್ಕೆ ಮುಂದಾಗುತ್ತಿದ್ದಂತೆ ಈಗಾಗಲೇ ಮೂವರು ರೈತರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ರೈತ ಮುಖಂಡ ಕೆ ಟಿ ಗಂಗಾಧರಸ್ವಾಮಿ ಕೂಡಾ ಇದ್ದರು. ಪ್ರತಿಭಟನೆಯ ವೇಳೆ ಮೋಟೆಬೆನ್ನೂರು ಗ್ರಾಮದಲ್ಲಿ ನಿಧನರಾಗಿದ್ದ ಬಸವರಾಜ್ ಅಂತ್ಯಕ್ರಿಯೆ ಮೆರವಣಿಗೆಗೆ ಬರುತ್ತಿದ್ದಂತೆ ರೈತರು ಬಂದ್ ಮಾಡಿದ್ದ ರಸ್ತೆ ತೆರವು ಮಾಡಿ ಗೌರವ ಸೂಚಿಸಿದರು.
ಇದನ್ನೂ ಓದಿ: ಅಡಿಕೆಗೆ ಎಲೆಚುಕ್ಕಿ ಬಾಧೆ ನಷ್ಟ: ಸಾಲಮನ್ನಾ ಮಾಡುವಂತೆ ರೈತರ ಆಗ್ರಹ