ಹಾವೇರಿ: ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಜಿಲ್ಲಾಕೇಂದ್ರ ಹಾವೇರಿಯಲ್ಲಿ ವಹಿವಾಟಿಗೆ ಸಮಯ ನಿಗದಿ ಮಾಡಿದೆ.
ಈ ಕುರಿತಂತೆ ತಾಲೂಕು ಪಂಚಾಯತ್ ಸಭಾಭವನದಲ್ಲಿ ವರ್ತಕರ ಹಾಗೂ ವಿವಿಧ ಉದ್ಯಮಿಗಳ ಸಭೆ ನಡೆಸಿದ ಸಂಸ್ಥೆ ದಿನಾಂಕ 16 -07-2020 ರಿಂದ 31-07-2020 ರವರೆಗೆ ನಗರದಲ್ಲಿ ವಹಿವಾಟು ನಡೆಸಲು ಅಂಗಡಿ ಮುಂಗಟ್ಟುಗಳಿಗೆ ಕಾಲಾವಧಿ ನಿಗದಿಪಡಿಸಿದೆ. ಈ 15 ದಿನಗಳ ಕಾಲ ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಮಾತ್ರ ವ್ಯಾಪಾರ ನಡೆಸಲು ಅನುಮತಿ ನೀಡಲಾಗಿದೆ.
ಮಧ್ಯಾಹ್ನ ಎರಡು ಗಂಟೆಯಿಂದ ಬಾರ್ ಸೇರಿದಂತೆ ಯಾವುದೇ ಅಂಗಡಿಗಳು ವಹಿವಾಟು ನಡೆಸುವುದಿಲ್ಲ. ಈ ಸಂದರ್ಭದಲ್ಲಿ ಔಷಧಿ, ಹಾಲು, ಕುಡಿಯುವ ನೀರಿನ ಘಟಕಗಳು ಸೇರಿದಂತೆ ಅವಶ್ಯಕ ವಸ್ತುಗಳ ಅಂಗಡಿಗಳು ಮಾತ್ರ ಬಾಗಿಲು ತೆರೆಯಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಪಿ.ಡಿ. ಶಿರೂರು ತಿಳಿಸಿದ್ದಾರೆ.
ಸಭೆಯಲ್ಲಿ ಹಾವೇರಿ ನಗರದ ವರ್ತಕರು, ವಿವಿಧ ವಾಣಿಜ್ಯೋದ್ಯಮಿಗಳು, ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.