ಹಾವೇರಿ: ರಾಜ್ಯದಲ್ಲಿಯೇ ಪ್ರಸಿದ್ಧವಾದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಕಾರ್ಣಿಕೋತ್ಸವ ಗುರುವಾರ ನಡೆಯಿತು. ದೇವರಗುಡ್ಡದ ಕಾರ್ಣಿಕ ನುಡಿಯುವ ಗೊರವಪ್ಪ ನಾಗಪ್ಪ 20 ಅಡಿ ಬಿಲ್ಲನ್ನೇರಿ ಪ್ರಸ್ತುತ ವರ್ಷದ ಕಾಣಿಕ ನುಡಿದು ಮೇಲಿನಿಂದ ಧುಮುಕಿದರು. 'ಎರಿ ದೊರೆಯಾತಲೇ ದೈವ ದರ್ಬಾರ್ ಆತಲೇ ಪರಾಕ್' ಎಂದು ಕಾರ್ಣಿಕ ನುಡಿದಿದ್ದಾರೆ.
ಬಿಲ್ಲಿನಿಂದ ಧುಮುಕಿದ ಗೊರವಪ್ಪನನ್ನ ಭಕ್ತರು ಕೆಳಗೆ ಬೀಳದಂತೆ ಹಿಡಿದರು. ಈ ಸಂದರ್ಭದಲ್ಲಿ ಬಂದಂತಹ ಭಕ್ತರು ಕಾರ್ಣಿಕ ವಿಶ್ಲೇಷಣೆ ಮಾಡಿದರು. ಕರಿಭೂಮಿ ರೈತರಿಗೆ ಉತ್ತಮ ಫಸಲು ಬರುತ್ತದೆ. ವಿಶ್ವ ಕೊರೊನಾ ಛಾಯೆಯಿಂದ ಹೊರಬರುತ್ತದೆ ಎಂದು ವಿಶ್ಲೇಷಕರು ವಿಶ್ಲೇಷಣೆ ಮಾಡಿದರು.
ಇದಕ್ಕೂ ಮೊದಲು ದೇವರಗುಡ್ಡದ ಕರಿಯಾಲದ ಸಮೀಪದಲ್ಲಿ ಹಲವು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು. ಈ ಕಾಣಿಕ ಕೇಳಲು ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದರು.